ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಬಿ.ಸರೋಜಾದೇವಿ ಅವರ ಅಂತ್ಯ ಸಂಸ್ಕಾರ ನಾಳೆ (ಜುಲೈ 15)ರಂದು ಮಂಡ್ಯ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶಾವರದಲ್ಲಿ ನೆರವೇರಲಿದೆ.
ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದ ಸರೋಜಾದೇವಿ ಅವರ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆ 11.30ರ ವರೆಗೆ ಏರ್ಪಡಿಸಲಾಗಿದ್ದು, ನಂತರ ದಶಾವರದಲ್ಲಿ ತಾಯಿ ಸಮಾಧಿ ಪಕ್ಕದಲ್ಲಿ ನೆರವೇರಲಿದೆ.
ಸರೋಜಾದೇವಿ ಪುತ್ರ ಗೌತಮ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ನಾಳೆ ಬೆಳಿಗ್ಗೆ 11.30ರ ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ದಶಾವರದ ಕಣ್ವ ಡ್ಯಾಂ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅವರ ತಾಯಿ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದರು.
ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು. ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.