ಬೆಂಗಳೂರಿನ ಯುವಕನೊಬ್ಬ ಆನ್‌ಲೈನ್ ಗೆಳತಿಯನ್ನು ಪ್ರೀತಿಸಲು ಹೋಗಿ 44 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಅರ್ಚನಾ ಎನ್ನುವ ಹೆಸರಿನಲ್ಲಿ ಯುವಕನನ್ನು ಇನ್ಸ್ಟಾಗ್ರಾಮ್ನಲ್ಲಿ ಬಲೆಗೆ ಬೀಳಿಸಿ ೪೪ ಲಕ್ಷ ರೂ. ಟೋಪಿ ಹಾಕಲಾಗಿದೆ. ಹೀಗೆ ಯುವಕನಿಗೆ ವಂಚಿಸಿದ ವ್ಯಕ್ತಿ ಮಹಿಳೆಯೇ, ಪುರುಷನೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಯುವಕ ಆನ್ಲೈನ್ನಲ್ಲಿ ಜೀವನ ಸಂಗಾತಿಯನ್ನು ಹುಡುಕುತ್ತಿದ್ದ. ಇನ್‌ಸ್ಟಾಗ್ರಾಮ್ ಮೂಲಕ ಅರ್ಚನಾ ಎಂದು ಹೇಳಿಕೊಂಡು ಪರಿಚಯ ಆಗಿ ಮೆಸೇಜ್ಗಳ ಮೂಲಕ ಸಲುಗೆ ಆಗಿದೆ. ಚಾಟ್ ತೀರಾ ವೈಯಕ್ತಿಕ ವಿಷಯಗಳವರೆಗೂ ಹೋಗಿದೆ.ಯುವಕನಿಗೆ ಅರ್ಚನಾ ಬಿಟ್‌ಕಾಯಿನ್ ಹೂಡಿಕೆ ಪ್ರೀತಿಯಿಂದ ಬೋಧನೆ ಮಾಡಿದ್ದು, ಮರುಳಾದ ಯುವಕ ಖೆಡ್ಡಾಗೆ ಬಿದ್ದಿದ್ದಾನೆ. ಹೆಚ್ಚಿನ ಆದಾಯದ ಭರವಸೆ ನೀಡಿರುವ ಅರ್ಚನಾ, ಆರಂಭದಲ್ಲಿ ಸಣ್ಣ ವಹಿವಾಟುಗಳನ್ನು ಪ್ರಯತ್ನಿಸಲು ಒತ್ತಾಯಿಸಿದ್ದು, ಬೇರೆ ಬೇರೆ ಬ್ಯಾಂಕ್ ಖಾತೆಗಳನ್ನು ನೀಡಿ ಹಣವನ್ನು ವರ್ಗಾಯಿಸಲು ಕೇಳಿದ್ದಂತೆ ಯುವಕ ಮಾಡಿದ್ದಾನೆ.
ಆರಂಭದಲ್ಲಿ ಆಮಿಷ ಒಡ್ಡಲು ಡಬಲ್ ಹಣವೂ ಯುವಕನಿಗೆ ಬಂದಿತ್ತು. ಅರ್ಚನಾ ಮಾತಿಗೆ ಮರುಳಾದ ಆತ ಹೆಚ್ಚು ಹೆಚ್ಚು ಹಣ ಹಾಕಿ 44 ಲಕ್ಷ ರೂಪಾಯಿ ಹೇಳಿದ ಖಾತೆಗೆ ಜಮಾ ಮಾಡಿದ್ದಾನೆ. ಇಷ್ಟಾಗುತ್ತಿದ್ದಂತೆಯೇ ಆತನಲ್ಲಿದ್ದ ದುಡ್ಡು ಖಾಲಿಯಾಗುವುದು ತಿಳಿದಾಗ ಆನ್‌ಲೈನ್ ಗೆಳತಿ ಅರ್ಚನಾ ನಾಪತ್ತೆ. ಬಳಿಕ ಯುವಕನಿಗೆ ತಾನು ಮೋಸ ಹೋಗಿರುವುದು ತಿಳಿದು, ಸೈಬರ್ ಕ್ರೈಂನವರಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆಯುತ್ತಿದೆ.