ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಬಿ. ಸರೋಜಾದೇವಿ ನಿಧನಕ್ಕೆ ಶಿವರಾಜ್ ಕುಮಾರ್, ರಜನಿಕಾಂತ್, ಖುಷ್ಬೂ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ವಯೋಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಬಿ. ಸರೋಜಾದೇವಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದರು.
ಮಲ್ಲೇಶ್ವರದ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಮಂಗಳವಾರ ಮಧ್ಯಾಹ್ನದ ನಂತರ ಅಂತ್ಯ ಸಂಸ್ಕಾರ ನೆರವೇರಲಿದೆ.
ಬಿ. ಸರೋಜಾದೇವಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್, ಯುವ ರಾಜ್ ಕುಮಾರ್, ಉಪೇಂದ್ರ, ಮಾಲಾಶ್ರೀ, ತಾರಾ, ಮುಖ್ಯಮಂತ್ರಿ ಚಂದ್ರು, ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಸರೋಜಾ ದೇವಿ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಕನ್ನಡ ಚಿತ್ರರಂಗ ಮಹಾನ್ ಕಲಾವಿದೆಯನ್ನು ಕಳೆದುಕೊಂಡಿದೆ. ಬಬ್ರುವಾಹನದಲ್ಲಿ ಅವರ ಪಾತ್ರ ನೋಡುತ್ತಿದ್ದರೆ ಮೈ ಝೂಮ್ ಎನಿಸುತ್ತಿದೆ ಎಂದು ಶಿವರಾಜ್ ಕುಮಾರ್ ಶೋಕ ವ್ಯಕ್ತಪಡಿಸಿದ್ದಾರೆ.
ರಜನಿಕಾಂತ್ ಟ್ವಿಟ್ ಮಾಡುವ ಮೂಲಕ ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದಿದ್ದರೆ, ಬಹುಭಾಷಾ ನಟಿ ಖುಷ್ಬೂ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.