2026ರ ಏಪ್ರಿಲ್‌ವರೆಗೆ ಕೊಪ್ಪಳ ನಗರಸಭೆಯಲ್ಲಿ ಹಣ ಇಲ್ಲ, ಖಜಾನೆ ಖಾಲಿಯಾಗಿದೆ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ವೆಂಕಟೇಶ ನಾಗನೂರು ಹೇಳಿದ್ದಾರೆ. ಕೊಪ್ಪಳ ನಗರಸಭೆಯ 31 ಸದಸ್ಯರಿಗೆ ಕಳೆದ 10 ತಿಂಗಳಿನಿಂದ ಗೌರವಧನ ಬಂದಿಲ್ಲ. ಖಜಾನೆಯಲ್ಲಿ ಹಣವಿಲ್ಲ ಎಂದು ಮಾಹಿತಿ ನೀಡಿದರು.
ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದಿಯಾಗಿ ಸದಸ್ಯರೆಲ್ಲ ಅಧಿಕಾರಿಗಳ ಅಂಧಾ ದರ್ಬಾರ್ ವಿರುದ್ಧ ಮುಗಿಬಿದ್ದರು. ಕಳೆದೊಂದು ವರ್ಷದಿಂದ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರವನ್ನೇ ನಿರ್ವಹಿಸದಿರುವುದು ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತು.
ನಿರ್ವಹಣಾಧಿಕಾರಿ ಸಭೆಯ ವಿಷಯಸೂಚಿಗಳನ್ನು ಮಂಡಿಸುತ್ತಿದ್ದಂತೆ ಮಾಜಿ ಅಧ್ಯಕ್ಷೆ ಶಿವಗಂಗಾ ಬೂಮಕ್ಕನವರ್ ವಿದ್ಯುತ್ ದೀಪ ಅಳವಡಿಕೆಗೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರ ಸೋಮಲಿಂಗ ಮತ್ತು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸೋಮಣ್ಣ ಹಳ್ಳಿ ಮಧ್ಯೆ ಪ್ರವೇಶಿಸಿ, ಅಮೃತ್ ಯೋಜನೆಯ 117 ಕೋಟಿ ರುಪಾಯಿ ಅನುದಾನದ ಟೆಂಡರ್ ಕಾಮಗಾರಿಯನ್ನು ಯಾರಿಗೆ ತಿಳಿಸಿ ಶುರು ಮಾಡಿದ್ದಿರಿ? ಯೋಜನೆಯ ವ್ಯಾಪ್ತಿ ಏನು ಎಂದು ಹರಿಹಾಯ್ದರು. ನೀರು ಸರಬರಾಜು ಮಂಡಳಿಯಿಂದ ಸುಮಾರು 139 ಕೋಟಿ ರೂಪಾಯಿಯ ಕಾಮಗಾರಿ ಭಾಗ್ಯನಗರದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿ ಸೋಮಲಿಂಗ ಹೇಳುತ್ತಿದ್ದಂತೆ ಸದಸ್ಯ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ರಾಜಶೇಖರ ಆಡೂರು ಮಾತನಾಡಿ, ದಿನಗೂಲಿ ನೌಕರರಿಗೆ ಎಷ್ಟು ತಿಂಗಳಿಂದ ಬಾಕಿ ಹಣ ಕೊಟ್ಟಿಲ್ಲ. ಆಗಿರುವ ಸಮಸ್ಯೆ ಏನು ಎಂದು ಪ್ರಶ್ನಿಸಿದರು. ನೇಮಕಾತಿ ಏಜೆನ್ಸಿಗೆ ಸಂಬಂಧಿಸಿದ ವಿಷಯವದು ಎಂದು ಪೌರಾಯುಕ್ತರು ಸಮಜಾಯಿಷಿ ನೀಡಿದರು. ಬರುವ ದಿನಗಳಲ್ಲಿ ದಿನಗೂಲಿ ಕೆಲಸಗಾರರು ನಗರದ ಸ್ವಚ್ಛತೆಯ ಕೆಲಸ ಮಾಡದಿದ್ದರೆ ಮುಂದೇನು ಮಾಡುತ್ತಿರಿ? ಸದಸ್ಯರೆಲ್ಲ ಅನುಮೋದನೆ ನೀಡುತ್ತೇವೆ. ಅವರನ್ನು ಅದೇ ಕೆಲಸದಲ್ಲಿ ಮುಂದುವರಿಸಿ ಎಂದು ಆಡೂರು ಪಟ್ಟು ಹಿಡಿದರು.
ಕೊಪ್ಪಳ ನಗರಸಭೆಯ 31 ಸದಸ್ಯರಿಗೆ ಕಳೆದ 10 ತಿಂಗಳಿನಿಂದ ಗೌರವಧನ ಬಂದಿಲ್ಲ. ಖಜಾನೆಯಲ್ಲಿ ಹಣವಿಲ್ಲ ಎಂದು ಪೌರಾಯುಕ್ತರು ಹೇಳಿದರು.
ನಗರಸಭೆಯ ಸದಸ್ಯರ 9.85 ಲಕ್ಷ ರೂಪಾಯಿ ಹತ್ತು ತಿಂಗಳ ಗೌರವಧನವನ್ನೇ ಕೊಡಲಾಗದ ನಗರಸಭೆ ನಗರದ ಅಭಿವೃದ್ಧಿ, ಸ್ವಚ್ಛತೆ ಹೇಗೆ ಮಾಡೀತು ಎಂದು ಸದಸ್ಯರು ಆಕ್ರೋಶ ಹೊರ ಹಾಕಿದರು. ಗಣಪತಿ ಹಬ್ಬದ ವೇಳೆ ನಗರದ ಹಲವೆಡೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಸುಮಾರು 17 ಲಕ್ಷ ರೂಪಾಯಿ ಖರ್ಚು ತೋರಿಸಲಾಗಿದೆ. ಇಷ್ಟು ಹಣ ಖರ್ಚು ಮಾಡಲು ಅನುಮೋದನೆ ನೀಡಿದ್ದು ಜಿಲ್ಲಾಧಿಕಾರಿಗಳು. ನಗರಸಭೆಯಲ್ಲಿ ಸದಸ್ಯರಿನ್ನೂ ಇದ್ದೇವೆ. ಸದಸ್ಯರಿಲ್ಲದ ವೇಳೆ ಜಿಲ್ಲಾಧಿಕಾರಿಗಳು ವಿವೇಚ ನಾಧಿಕಾರ ಬಳಸಿ ನಗರಸಭೆಯ ಅನುದಾನ ಬಳಕೆಗೆ ಅನುಮೋದನೆ ನೀಡಲಿ. ಆದರೆ ಸದಸ್ಯರ ಗಮನಕ್ಕೆ ಬಾರದಂತೆ ಇಷ್ಟು ದೊಡ್ಡ ಮೊತ್ತವನ್ನು ಬಳಸಿದ್ದು ದುರಂತ ಎಂದು ಸದಸ್ಯ ಚನ್ನಪ್ಪ ಬೇಸರ ವ್ಯಕ್ತಪಡಿಸಿದರು.
170 ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತಿಸಿದ್ದು ಅಲ್ಲೆಲ್ಲ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ಸಿಸಿ ಕ್ಯಾಮೆರಾಕೆ ಒಂದು ದಿನಕ್ಕೆ ಒಂದು ಸಾವಿರ ಬಾಡಿಗೆಯಂತೆ ಹದಿನೈದು ದಿನಗಳವರೆಗೆ 22 ಲಕ್ಷ ರೂಪಾಯಿ ಬಾಡಿಗೆ ಪಾವತಿಸಬೇಕಿದೆ. ನಗರಸಭೆಯ ಇನ್ನೂ ಹಣವನ್ನು ಟೆಂಡರ್‌ದಾರರಿಗೆ ಪಾವತಿಸಿಲ್ಲ. ಅದನ್ನು 12.50 ಲಕ್ಷ ರೂಪಾಯಿಗೆ ಇಳಿಕೆ ಮಾಡಲು ಸೂಚಿಸಲಾಗಿದೆ ಎನ್ನುತ್ತಿದ್ದಂತೆ. ಬಾಡಿಗೆಗೆ ಅಷ್ಟು ಹಣ ವ್ಯಯ ಮಾಡುವ ಬದಲು ಹೊಸ ಸಿಸಿ ಕ್ಯಾಮೆರಾಗಳನ್ನೇ ಖರೀದಿಸಬಹುದು ಎಂದು ಸದಸ್ಯರು ಅಧಿಕಾರಿಗಳ ಲೂಟಿತನಕ್ಕೆ ಕಿಡಿ ಕಾರಿದರು.
ಕೊಪ್ಪಳ ನಗರಸಭೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿರುವ ವಿಷಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸುಮಾರು 318 ಕಡತಗಳು ಕಾಣೆಯಾಗಿವೆ. ಸುಮಾರು 141 ಕಡತಗಳು ಲೋಕಾಯುಕ್ತ ಸುಪರ್ದಿಯಲ್ಲಿವೆ. ನಗರಸಭೆ ಅಧ್ಯಕ್ಷರ ಸಹೋದರನ ಮೇಲೂ ಕಳಂಕ ಬಂದಿದೆ. ಇಷ್ಟಕ್ಕೆ ಅಧ್ಯಕ್ಷರ ದುರಾಡಳಿತವೇ ಕಾರಣ ಎಂಬುದು ಜನಾಭಿಪ್ರಾಯ. ಅಧಿಕಾರಿಗಳು ಮಾಡುವ ಲೂಟಿ ಕೆಲಸಕ್ಕೆ ಬಡ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ. ಲೋಕಾಯುಕ್ತ ವರದಿಯನ್ನು ಎಲ್ಲ ಸದಸ್ಯರಿಗೂ ಕೊಡಿ. ಲೋಪ ಯಾರದ್ದು ಎಂಬುದು ಬಹಿರಂಗವಾಗಲಿ ಎಂದು ಸದಸ್ಯರು ಪಕ್ಷಬೇಧ ಮರೆತು ಪೌರಾಯುಕ್ತರಿಗೆ ಆಗ್ರಹಿಸಿದರು.
ನಗರದ 19ನೇ ವಾರ್ಡಿನಲ್ಲಿ ಅಂಬೇಡ್ಕರ್ ಭವನ ಕಾಮಗಾರಿಗೆ 11 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತೋರಿಸಿದ ಲೆಕ್ಕಕ್ಕೆ ಅಸಮಾಧಾನ ವ್ಯಕ್ತಪಪಡಿಸಿದ ಸದಸ್ಯ ಮಹೇಂದ್ರ ಛೋಪ್ರಾ, ಇದು ನಮ್ಮ ವಾರ್ಡ್. ಇಲ್ಲಿ ಅಂಬೇಡ್ಕರ್ ಭವನವೇ ಇಲ್ಲ ಎನ್ನುತ್ತಿದ್ದಂತೆ. ಅದು 19ನೇ ವಾರ್ಡ್ ಅಲ್ಲ, 11 ನೇ ವಾರ್ಡ್. ಕಣ್ತಪ್ಪಿನಿಂದ ಮುದ್ರಣದೋಷ ಆಗಿದೆ ಎಂದು ಸಬೂಬು ಹೇಳುತ್ತಿದ್ದಂತೆ, 11 ನೇ ವಾರ್ಡ್‌ನ ನಗರಸಭೆ ಸದಸ್ಯರು ಭವನ ಪೂರ್ಣವಾಗಿದೆಯಾ? ಎಂದು ವ್ಯಂಗ್ಯವಾಡು ತ್ತಿದ್ದಂತೆ ಅಧಿಕಾರಿಗಳು ಪೇಚಿಗೆ ಸಿಲುಕಿದರು.


