ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ (87 ) ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಸರೋಜಾದೇವಿ ಜನವರಿ 7, 1938 ರಲ್ಲಿ ಜನಿಸಿದ್ದರು.
ಮೃತದೇಹ ಮಲ್ಲೇಶ್ವರಂ ನಿವಾಸದಲ್ಲಿದ್ದು ಪೊಲೀಸರು ಭದ್ರತೆ ವ್ಯವಸ್ಥೆ ಮಾಡುತ್ತಿದ್ದಾರೆ. ಹಲವು ಗಣ್ಯರು ನಿವಾಸಕ್ಕೆ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅವರ ಅಂತ್ಯಕ್ರಿಯೆ ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ನಡೆಯಲಿದೆ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ
ಆರು ದಶಕ ಚಿತ್ರರಂಗದಲ್ಲಿ ಕಂಗೊಳಿಸಿದ್ದ ಅವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.
17ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾಗಿದ್ದ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮುಂತಾದ ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು.
ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಮತ್ತು ಎಂ.ಜಿ. ರಾಮಚಂದ್ರನ್ , ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಮತ್ತು ಸುನೀಲ್ ದತ್ ಅವರೊಂದಿಗೆ ನಟಿಸಿದ್ದಾರೆ. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್‌ಕುಮಾರ್ ನಟನೆಯ ನಟ ‘ಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.
ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂತಾಪ ಸಲ್ಲಿಸಿದ್ದಾರೆ.
ಸರೋಜಾ ದೇವಿ ಹಿರಿಯ ತಾರೆ. ನನಗೆ ಬಹಳ ಆತ್ಮೀಯರಾಗಿದ್ದರು. ಅನೇಕ ಸಂದರ್ಭದಲ್ಲಿ ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ ಅವರ ಆರೋಗ್ಯ ಸಲ್ಪ ಹೆಚ್ಚುಕಮ್ಮಿ ಆಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಭಾರತದ ಅನೇಕ ಚಿತ್ರನಟರ ಜೊತೆ ನಟಿಸಿದ್ದರು. ಅವರ ಅಭಿಮಾನಿಗಳಿಗೆ, ಬಂಧುಗಳಿಗೆ ಭಗವಂತ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ, ‘ಅಭಿನಯ ಸರಸ್ವತಿ’ ಎಂದೇ ಹೆಸರುವಾಸಿಯಾಗಿದ್ದ ಶ್ರೀಮತಿ ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸುಮಾರು 160ಕ್ಕೂ ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಅವರ ಅಗಲಿಕೆಯಿಂದ, ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.