ಹಿರಿಯ ಪತ್ರಕರ್ತ, ಸಂಪಾದಕರಾದ ಕೆ.ಬಿ.ಗಣಪತಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಗ್ಗೆ ಹಠಾತ್ ಹೃದಯಾಘಾತದಿಂದ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೈಸೂರು ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಕೆ.ಬಿ.ಗಣಪತಿ ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆ ಸಂಪಾದಕರಾಗಿದ್ದರು. ಕಳೆದ 50 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರು ಮೈಸೂರಿನ ಕೆ.ಸಿ.ಲೇ ಔಟ್ ನಲ್ಲಿ ವಾಸವಾಗಿದ್ದರು.
ಐವತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಕೆ.ಬಿ. ಗಣಪತಿ ಮೂಲತಃ ಕೊಡಗಿನವರು. ತಮ್ಮದೇ ಅಂಕಣದ ಮೂಲಕ ಗಮನ ಸೆಳೆದಿದ್ದ ಗಣಪತಿ ಅವರು ಸದಾ ಸುದ್ದಿ ಮನೆಯಲ್ಲಿ ಕ್ರಿಯಾಶೀವಾಗಿದ್ದವರು. ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ನಂತರ ಮುಂಬಯಿಗೆ ತೆರಳಿ ಅಲ್ಲಿಯ .ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು.
ಮುಂಬೈನಲ್ಲಿ ಪ್ರಿ ಪ್ರೆಸ್ ಜರ್ನಲ್, ಇಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ ದುಡಿದು, ಕೆಲ ಕಾಲ ಪುಣೆಯಲ್ಲಿ ಜಾಹೀರಾತು ಸಂಸ್ಥೆ ಆರಂಭಿಸಿದರು. ಬಳಿಕ ಮೈಸೂರಿಗೆ ಬಂದು ಪತ್ರಿಕೆಗಳನ್ನು ಆರಂಭಿಸಿದ್ದು ಇತಿಹಾಸ. ಆದರ್ಶವಾದಿ ಕಾದಂಬರಿ, ಅಮೆರಿಕ- ಆ್ಯನ್ ಏರಿಯಾ ಆಫ್ ಲೈಟ್ ಪ್ರವಾಸ ಕಥನ, ದಿ ಕ್ರಾಸ್ ಆ್ಯಂಡ್ ದಿ ಕೂಗ್೯ ಇಂಗ್ಲಿಷ್ ಕಾದಂಬರಿ, ಸ್ಟಾರ್ ಆಫ್ ಮೈಸೂರು- ಸ್ಟಾರ್ ಆಫ್ ಎ ಯೂನಿಕ್ ಇವನಿಂಗ್ ಇಂಗ್ಲಿಷ್ ನ್ಯೂಸ್ ಪೇಪರ್, ಸ್ವಾಡ್೯ ಆಫ್ ಶಿವಾಜಿ ಜೀವನಚರಿತ್ರೆ ಅವರ ಕೃತಿಗಳು.
ಕೆ.ಬಿ.ಗಣಪತಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.