ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಹಿಳೆ ಬೆಂಗಳೂರಿನ ವಿಜಯನಗರ ಸಮೀಪದ ಹಂಪಿನಗರದಲ್ಲಿ ಬಿಎಂಟಿಸಿ ಬಸ್‌ಗೆ ಬಲಿಯಾಗಿರುವ ಘಟನೆ ನಡೆದಿದೆ.
ಯಲಹಂಕದಿಂದ ಹಂಪಿನಗರದತ್ತ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಹಂಪಿನಗರ ಬಸ್ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದ ವೇಳೆ ಡಿಕ್ಕಿ ಹೊಡೆದು 58 ವರ್ಷದ ಮಹಿಳೆ ಮಾಲಾ ಅಸು ನೀಗಿದ್ದಾರೆ. ಚಾಲಕ ರೈಟ್ ಟರ್ನ್ ತೆಗೆದುಕೊಳ್ಳುತ್ತಿದ್ದಾಗ ರಸ್ತೆ ದಾಟುತ್ತಿದ್ದ ಮಾಲಾ ಅವರ ತಲೆಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಂಪಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಾಲಾ ಅವರ 58 ರ ಹುಟ್ಟು ಹಬ್ಬವನ್ನು ಭಾನುವಾರ ಆಚರಿಸಲೆಂದು ಬೇರೆ ಬೇರೆ ಊರುಗಳಿಂದ ಕುಟುಂಬಸ್ಥರು ಮನೆಗೆ ಬಂದಿದ್ದರು. ಆದರೆ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕ ಆವರಿಸಿದ್ದು, ಮಾಲಾ ಅವರು ಸಾವಿನ ಮನೆ ಸೇರಿದ್ದಾರೆ.
ಚಾಲಕನಿಗೆ ಫಿಟ್ಸ್ : ಸರಣಿ ಅಪಘಾತ
ಚಿನ್ನಸ್ವಾಮಿ ಸ್ಟೇಡಿಯಂನ 9ನೇ ಗೇಟ್ ಬಳಿ ಶನಿವಾರ ಸರಣಿ ಅಪಘಾತ ಸಂಭವಿಸಿ 9 ವಾಹನಗಳು ಹಾನಿಗೊಂಡಿವೆ. ಬಿಎಂಟಿಸಿ ಬಸ್ ಚಾಲಕನಿಗೆ ಚಲಾಯಿಸುತ್ತಿರುವಾಗಲೇ ಪಿಟ್ಸ್ ಬಂದಿದ್ದರಿಂದ ಬಸ್ ನಿಯಂತ್ರಣ ತಪ್ಪಿ 3 ಆಟೋಗಳು, 3 ಕಾರುಗಳು ಮತ್ತು 3 ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ.
ಒಬ್ಬ ಆಟೋ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಸ್ ಚಾಲಕನಿಗೆ ಹಠಾತ್ ಪಿಟ್ಸ್ ಬಂದು ಬಸ್ ರಸ್ತೆಯ ಮಧ್ಯೆಯೇ ಬಸ್ ನಿಂತಿದ್ದರಿಂದ ಹಿಂಭಾಗದಿಂದ ಬರುತ್ತಿದ್ದ ವಾಹನಗಳು ಒಂದರ ಹಿಂದೆ ಒಂದು ಬಂದು ಡಿಕ್ಕಿ ಹೊಡೆದಿವೆ.


