ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್‌ಗೆ 20 ದಿನಗಳ ಮಧ್ಯಂತರ ಜಾಮೀನು ಮಂಜೂರಾಗಿದೆ. ಆರೋಪಿ ಪ್ರದೋಶ್ ತಂದೆ ಸುಬ್ಬಾರಾವ್ ಇತ್ತೀಚೆಗೆ ನಿಧನರಾಗಿದ್ದು, ಅವರ ಉತ್ತರಾದಿ ಕ್ರಿಯೆಗಳಿಗಾಗಿ ಜಾಮೀನು ನೀಡಬೇಕೆಂದು ಬೆಂಗಳೂರಿನ 57 ಸಿಸಿಹೆಚ್ ಕೋರ್ಟ್ಗೆ ಅರ್ಜಿ ಹಾಕಲಾಗಿತ್ತು. ಪರಿಶೀಲಿಸಿದ ನ್ಯಾಯಾಲಯವು 20 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ರೇಣುಕಾಸ್ವಾಮಿ ಕೊಲೆ ನಡೆದಾಗ ದರ್ಶನ್ ಜೊತೆಗೆ ಇದ್ದ ಪ್ರದೋಶ್, ನಂತರ ದರ್ಶನ್ ಅವರಿಂದ 30 ಲಕ್ಷ ರೂಪಾಯಿ ಪಡೆದುಕೊಂಡು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪ ಹೊಂದಿದ್ದಾನೆ. ರೇಣುಕಾ ಸ್ವಾಮಿ ಕೊಲೆ ನಡೆದ ದಿನದಂದು ದರ್ಶನ್, ಪ್ರದೋಶ್ ಒಡೆತನದ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿಯೇ ಇದ್ದಿದ್ದು ದೃಢಪಟ್ಟಿದೆ. ಸ್ಟೋನಿ ಬ್ರೂಕ್ನಲ್ಲಿಯೇ ರೇಣುಕಾ ಸ್ವಾಮಿ ಅಪಹರಣದ ಸಂಚು ಮಾಡಲಾಗಿತ್ತು ಎಂಬ ಆರೋಪವೂ ಇದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಮತ್ತೆ ಏಳು ಆರೋಪಿಗಳು ಜೈಲು ಸೇರಿದ್ದರು. ಮತ್ತೆ ಜೈಲು ಸೇರಿದಾಗಿನಿಂದಲೂ ಪವಿತ್ರಾ, ದರ್ಶನ್ ಸೇರಿ ಕೆಲವರು ಜಾಮೀನು ಪಡೆಯುವ ಯತ್ನದಲ್ಲಿದ್ದಾರೆ ಆದರೆ ಸಾಧ್ಯವಾಗಿಲ್ಲ.
ರೇಣುಕಾ ಸ್ವಾಮಿ ಕೊಲೆ ಮುಚ್ಚಿ ಹಾಕಲು ಆರೋಪಿ ಪ್ರದೋಶ್ ಸಾಕಷ್ಟು ಪ್ರಯತ್ನ ಮಾಡಿ ನಕಲಿ ಆರೋಪಿಗಳನ್ನು ಸೃಷ್ಟಿಸಿ ಶವದ ಸಾಗಾಟ ಮತ್ತು ಅದರ ವಿಲೇವಾರಿಯಲ್ಲಿಯೂ ಪಾತ್ರ ವಹಿಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿರುವ ಆರೋಪವಿದೆ. ಪ್ರಕರಣ ಬೆಳಕಿಗೆ ಬಂದಾಗ ಆರೋಪಿ ಅನುಕುಮಾರ್ ಅವರ ತಂದೆ ಮೃತಪಟ್ಟಿದ್ದರು, ಅನುಕುಮಾರ್ಗೆ ತಂದೆಯ ಅಂತಿಮಕ್ರಿಯೆಯಲ್ಲಿ ಭಾಗವಹಿಸಲು ಕೋರ್ಟ್ ಅವಕಾಶ ನೀಡಿತ್ತು.


