Menu

ಬಾಗಲಕೋಟೆ ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಬಾಗಲಕೋಟೆಯ ನವನಗರದ 49ನೇ ಸೆಕ್ಟರ್‌ನಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಬದಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.

ಕೆಲವು ದಿನಗಳಿಂದ ನೆಲಕ್ಕೆ ಬಿದ್ದುಕೊಂಡಿದ್ದ ವಿದ್ಯುತ್ ತಂತಿ ತುಳಿದು ಈ ಸಾವು ಸಂಭವಿಸಿದೆ. ನೆಲಕ್ಕೆ ಬಿದ್ದಿದ್ದ ತಂತಿ ತೆಗೆದುಹಾಕುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಹೆಸ್ಕಾಂ ಸಿಬ್ಬಂದಿ ಕಡೆಗಣಿಸಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿ ಬದಿಯ ವಿದ್ಯುತ್ ದೀಪಗಳ ಸ್ವಿಚ್ ಮತ್ತು ಬಟನ್‌ಗಳಿರುವ ಬೋರ್ಡ್‌ನ ಪಕ್ಕದಲ್ಲೇ ವಿದ್ಯುತ್ ತಂತಿ ಬಿದ್ದಿತ್ತು. ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಂತಿ ತುಳಿದಿದ್ದಾರೆ. ಕೂಡಲೇ ವಿದ್ಯುತ್ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಘಟನೆಯನ್ನು ವೀಡಿಯೊ ಮಾಡಿದ್ದು, ನೆಲದಲ್ಲಿ ನರಳಾಡುತ್ತಾ ನಡುಗುತ್ತಾ ದಾರುಣವಾಗಿ ಜೀವ ಹೋಗಿದೆ.

ಸ್ಥಳೀಯರು ಕಟ್ಟಿಗೆ ತಂದು ತಂತಿಯನ್ನು ದೂರ ಮಾಡಲು ಯತ್ನಿಸಿದರಾದರೂ ವ್ಯಕ್ತಿಯನ್ನು ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಹೆಸ್ಕಾಂ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿಯಾಗಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿಯ ಹೆಸರು, ಇತರ ವಿವರಗಳು, ಗುರುತು ಇನ್ನೂ ಗೊತ್ತಾಗಿಲ್ಲ.

ಮಲಮಗಳನ್ನು ಉಸಿರುಗಟ್ಟಿಸಿ ಕೊಂದು ತಂದೆ ಪರಾರಿ

ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಲಮಗಳನ್ನು ಉಸಿರುಗಟ್ಟಿಸಿ ಕೊಂದು ತಂದೆ ಪರಾರಿಯಾಗಿರುವ ಘಟನೆ ನಡೆದಿದೆ.

ರಾಮಸಂದ್ರ ಸಮೀಪದ ಕನ್ನಿಕಾ ಬಡಾವಣೆ ನಿವಾಸಿ ಸಿರಿ (7) ಕೊಲೆಯಾದ ಮಗು. ಪರಾರಿಯಾಗಿರುವ ಮೃತಳ ಮಲತಂದೆ ದರ್ಶನ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಜೆ ಶಾಲೆಯಿಂದ ಮನೆಗೆ ಮರಳಿದ ಬಳಿಕ ಮಗಳ ಮೇಲೆ ಹಲ್ಲೆ ಮಾಡಿ ಉಸಿರುಗಟ್ಟಿಸಿ ದರ್ಶನ್ ಹತ್ಯೆಗೈದಿದ್ದಾನೆ. ಪತ್ನಿ ಮನೆಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿಮೊದಲ ಪತಿಯಿಂದ ಪ್ರತ್ಯೇಕವಾಗಿ ಶಿಲ್ಪಾ, ರಾಮಸಂದ್ರದ ಕನ್ನಿಕಾ ಬಡಾವಣೆಯಲ್ಲಿ ತಾಯಿ ಹಾಗೂ ಮಗಳ ಜತೆ ವಾಸವಾಗಿದ್ದರು. ನಾಲ್ಕು ತಿಂಗಳ ಹಿಂದೆ ಆಕೆಗೆ ಇನ್‌ಸ್ಟಾಗ್ರಾಂನಲ್ಲಿ ಪಾವಗಡ ತಾಲೂಕಿನ ದರ್ಶನ್ ಪರಿಚಯವಾಗಿದೆ. ಆನೇಕಲ್ ಸಮೀಪದ ದಿನಸಿ ಅಂಗಡಿಯಲ್ಲಿ ಆತ ಕೆಲಸ ಮಾಡುತ್ತಿದ್ದ.

ನಾಲ್ಕು ತಿಂಗಳ ಹಿಂದೆ ತನಗಿಂತ ಎಂಟು ವರ್ಷ ಕಿರಿಯ ದರ್ಶನ್ ಜತೆ ಶಿಲ್ಪಾ ಎರಡನೇ ವಿವಾಹವಾಗಿದ್ದಳು. ಇತ್ತೀಚೆಗೆ ಅನಾರೋಗ್ಯದಿಂದ ಶಿಲ್ಪಾಳ ತಾಯಿ ಮೃತಪಟ್ಟ ಬಳಿಕ ಸಣ್ಣಪುಟ್ಟ ಕಾರಣಗಳಿಗೆ ಪತ್ನಿ ಹಾಗೂ ಮಲಮಗಳೊಂದಿಗೆ ದರ್ಶನ್ ಗಲಾಟೆ ಮಾಡುತ್ತಿದ್ದ. ಸರಿಯಾಗಿ ಟ್ಯೂಷನ್‌ ಗೆ ಹೋಗುವುದಿಲ್ಲ ಎಂದು ಕಾರಣ ನೀಡಿ ಮಗಳ ಮೇಲೆ ದರ್ಶನ್ ಹಲ್ಲೆ ಮಾಡಿ ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *