ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್), 2024-2025 ನೇ ಆರ್ಥಿಕ ವರ್ಷದಲ್ಲಿ ದಾಖಲೆಯ ಸಾಧನೆ ಮಾಡುವ ಮೂಲಕ ಭಾರಿ ಲಾಭದೊಂದಿಗೆ
ಮುನ್ನಡೆಯುತ್ತಿದೆ. 2024- 25ರ ಆರ್ಥಿಕ ವರ್ಷದಲ್ಲಿ 1786 ಕೋಟಿ ರೂ. ವಹಿವಾಟು ಹಾಗೂ 451 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ.
ಎರಡು ವರ್ಷಗಳ ಅವಧಿಯಲ್ಲಿ (2022-23 ರ 181 ಕೋಟಿಗೆ ಹೋಲಿಸಿದರೆ) ಸಂಸ್ಥೆಯ ಲಾಭವು ದ್ವಿಗುಣಕ್ಕಿಂತ ಹೆಚ್ಚು ವೃದ್ಧಿಸಿರುವುದು ಗಮನಾರ್ಹ. ಮಾರುಕಟ್ಟೆಯ ತೀವ್ರ ಪೈಪೋಟಿಯ ನಡುವೆಯೂ ಕೆಎಸ್‌ಡಿಎಲ್ ತನ್ನ ಪ್ರಮುಖ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಿದೆ. 2024-25 ರ ಸಾಲಿಗೆ ಒಟ್ಟು 43,144 ಮೆಟ್ರಿಕ್ ಟನ್‌ಗಳಷ್ಟು ಮಾರಾಟವಾಗುವ ನಿರೀಕ್ಷೆಯಿದೆ.
ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿದ್ದು, ಶವರ್ ಜೆಲ್‌ಗಳು, ಗ್ಲಿಸರಿನ್ ಆಧಾರಿತ ಸಾಬೂನುಗಳು ಮತ್ತು ಸುಪರ್ ಪ್ರೀಮಿಯಂ ಸ್ನಾನದ ಸಾಬೂನುಗಳು ಸೇರಿದಂತೆ ಒಟ್ಟು 21ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮೈಸೂರು ಸ್ಯಾಂಡಲ್ ಸಾಬೂನು ಸೇರಿದಂತೆ ಒಟ್ಟು 19 ಬಗೆಯ ಸಾಬೂನುಗಳು, ಮಾರ್ಜಕಗಳು, ಅಗರಬತ್ತಿಗಳು ಮತ್ತು ಸೌಂದರ್ಯವರ್ಧಕಗಳನ್ನು ಕೆಎಸ್‌ಡಿಎಲ್ ಉತ್ಪಾದಿಸುತ್ತಿದೆ.
ಹಣಕಾಸಿನ ವಿಚಾರದಲ್ಲಿ, 2024-25 ನೇ ಸಾಲಿನಲ್ಲಿ 1786 ರೂ. ಕೋಟಿ ವಹಿವಾಟು ನಡೆಸುವ ಪ್ರಸ್ತಾವನೆಯು, ಹಿಂದಿನ ವರ್ಷದ (2023-24) ಕೋಟಿ 1571 ರೂ. ವಹಿವಾಟಿಗಿಂತ ಗಣನೀಯವಾಗಿ ಅಧಿಕವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉತ್ಪಾದನೆ ಮತ್ತು ಮಾರಾಟದ ಜೊತೆಗೆ, ಕೆಎಸ್‌ಡಿಎಲ್ ‘ಶ್ರೀಗಂಧದ ಅಧ್ಯಯನ ಪೀಠ’ ಎಂಬ ಯೋಜನೆಯ ಮೂಲಕ ಶ್ರೀಗಂಧದ ಸಸಿಗಳನ್ನು ಬೆಳೆಸುವ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ


