ಕಾರವಾರ: ಗೋಕರ್ಣ ಪೊಲೀಸರು ರಾಮತೀರ್ಥ ಗುಡ್ಡದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮೂಲದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಿಸಿದ್ದಾರೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ವೀಸಾ ಅವಧಿ ಮುಗಿದಿರುವುದು ಪತ್ತೆಯಾದ ನಂತರ ಅವರನ್ನು ರಷ್ಯಾಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀಧರ್ ಎಸ್.ಆರ್ ಮತ್ತು ಅವರ ತಂಡ ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಕಾಡಿನೊಳಗಿನ ಗುಹೆಯೊಂದರಲ್ಲಿ ಅಪರಿಚಿತರು ವಾಸಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಕೊನೆಗೆ ಪೊಲೀಸರು ಪರಿಶೀಲಿಸಿದಾಗ, 40 ವರ್ಷದ ರಷ್ಯಾ ಮೂಲದ ನಿನಾ ಕುಟಿನಾ ಎಂಬ ಮಹಿಳೆ ತಮ್ಮ ಆರು ವರ್ಷ ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ.
ಪೊಲೀಸರ ವಿಚಾರಣೆ ವೇಳೆ, ನಿನಾ ಕುಟಿನಾ ಅವರು ದೇವರ ಪೂಜೆ ಮತ್ತು ಧ್ಯಾನಕ್ಕಾಗಿ ಗೋವಾದಿಂದ ಮಕ್ಕಳೊಂದಿಗೆ ಬಂದಿದ್ದು, ಗುಹೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಆಗ ಪೊಲೀಸರು, ರಾಮತೀರ್ಥ ಗುಡ್ಡದಲ್ಲಿ ಈ ಹಿಂದೆ ಗುಡ್ಡ ಕುಸಿತ ಸಂಭವಿಸಿದ್ದರಿಂದ ಇದು ಅಪಾಯಕಾರಿ ಪ್ರದೇಶವಾಗಿದೆ. ಅಲ್ಲದೇ, ಹಾವುಗಳು ಸೇರಿದಂತೆ ವಿಷಕಾರಿ ಜಂತುಗಳ ವಾಸವಿರುವ ಕಾರಣ ಅಲ್ಲಿ ವಾಸಿಸುವುದು ಅಪಾಯಕಾರಿ ಎಂದು ಮಹಿಳೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಗುಹೆಯಿಂದ ಕೆಳಗೆ ಕರೆತಂದಿದ್ದಾರೆ. ನಂತರ ಅವರ ಇಚ್ಛೆಯಂತೆ ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಶಂಕರ ಪ್ರಸಾದ ಫೌಂಡೇಶನ್ ಎಂಬ ಎನ್‌ಜಿಒ ಸಂಸ್ಥೆಯ ಯೋಗರತ್ನ ಸರಸ್ವತಿ ಸ್ವಾಮೀಜಿಯ ಆಶ್ರಮಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಕರೆದೊಯ್ದಿದ್ದಾರೆ.