ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವ, ಪಂಚಾಯಿತಿ ಸದಸ್ಯ, ನಿಗಮ ಮಂಡಳಿ ಸೇರಿದಂತೆ ಇತರೇ ಅಧಿಕಾರಯುತ ಸ್ಥಾನ ಬೇಕು ಎಂದು ಪಕ್ಷ ಸೇರುವುದು ಮುಖ್ಯವಲ್ಲ. ಈ ಪಕ್ಷಕ್ಕಾಗಿ ದುಡಿಯುವುದು ಮುಖ್ಯ. ಎಲ್ಲರಿಗೂ ಮಾತನಾಡುವ ದನಿ ಶಕ್ತಿ ನೀಡಿರುವುದೇ ಹೆಗ್ಗಳಿಕೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಭಾರತ್ ಜೋಡೋ ಭವನದಲ್ಲಿ ನಡೆದ ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡಿದರು. ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಅವಕಾಶ ಸಿಗುವುದಿಲ್ಲ. ನನಗೆ ಬೇರೆ ಪಕ್ಷದಲ್ಲಿ ಇಂತಹ ಕುರ್ಚಿ (ಅಧಿಕಾರ) ನೀಡಲು ಸಾಧ್ಯವಾಗುತ್ತಿರಲಿಲ್ಲ. ವೇದಿಕೆಯಲ್ಲಿರುವ ಪಕ್ಷದ ನಾಯಕರಿಗೆ ಇಂತಹ ಸ್ಥಾನ ನೀಡಲು ಯಾವುದೇ ಪಕ್ಷದಲ್ಲಿ ಆಗುತ್ತಿರಲಿಲ್ಲ. ಕಾಂಗ್ರೆಸ್ ದಿಂದ ಮಾತ್ರ ಸಾಧ್ಯ ಎಂದರು.
ಬಿ.ಟಿ.ಲಲಿತಾ ನಾಯಕ್ ಅವರು ಕವಿ ಮನಸ್ಸಿನ ಹೋರಾಟಗಾರ್ತಿ. ಅವರ ಬದುಕೇ ಒಂದು ಹೋರಾಟ. ಮಾಜಿ ಮಂತ್ರಿಯಾಗಿ, ಶಾಸಕರಾಗಿ ಅನೇಕ ಸಂಘಟನೆಗಳಲ್ಲಿ ದುಡಿದಿರುವವರು. ಹೋರಾಟ ಅನ್ನುವುದೇ ಲಲಿತಾ ನಾಯಕ್ ಅವರ ಬ್ರಾಂಡ್. ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಕಾಂಗ್ರೆಸ್ ಪಕ್ಷ ಸೇರಿರುವ ಎಲ್ಲಾ ಮುಖಂಡರುಗಳಿಗೆ ತುಂಬು ಹೃದಯದ ಸ್ವಾಗತ ಎಂದು ಹೇಳಿದರು.
ನಾವು ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡುವಾಗ ಮೊಣಕಾಲ್ಮೂರಿನ ಬಳಿ ಓರ್ವ ವೃದ್ಧೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇ ಕಾಯಿ ಕೊಟ್ಟರು. ಆಗ ಆ ಅಜ್ಜಿ ಒಂದು ಮಾತು ಹೇಳಿದರು. ಭೂಮಿಯಲ್ಲಿ ಬೆಳೆದಿರುವ ಸೌತೇಕಾಯಿ ಎಂದು ಹೇಳಿದರು. ಇಂತಹ ಕಾರ್ಯಕ್ರಮವನ್ನು ಬಿಜೆಪಿ, ಜನತಾದಳ ನೀಡಲಿಲ್ಲ. ಪಿಂಚಣಿಗಳು, ವಿದ್ಯೆ, ಆಸ್ಪತ್ರೆ, ಹಸಿದವರಿಗೆ ಅನ್ನ ಸೇರಿದಂತೆ ಬಡವರ ಬದುಕಿನಲ್ಲಿ ಬದಲಾವಣೆ ತಂದಿರುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ಈ ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ, ಜಾತ್ಯಾತೀತ ತತ್ವ, ರಾಷ್ಟ್ರಧ್ವಜ ಹೀಗೆ ಈ ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿರುವ ಕೆಲಸ ಮಾಡಿರುವುದು ಕಾಂಗ್ರೆಸ್ ಮಾತ್ರ. ಈ ಕೆಲಸವನ್ನು ಬಿಜೆಪಿ ಮಾಡಿದೆಯೇ? ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಾವು ಘೋಷಣೆ ಮಾಡಿದ್ದೇವೆ. ಈ ಕ್ರಾಂತಿಕಾರಿ ಕೆಲಸವನ್ನು ಬಿಜೆಪಿ ಮಾಡಿದ್ದಾರೆಯೇ? ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಸಂವಿಧಾನ ರಕ್ಷಣೆಗೆ ನಾವು ಬೆಳಗಾವಿಯಲ್ಲಿ ಸಮಾವೇಶ ಮಾಡಿದ್ದೇವೆ. ಮಹಾತ್ಮ ಗಾಂಧಿ ಅವರು ಕುಳಿತಂತಹ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ ಎಂದು ಹೇಳಿದರು.
ಬೆಲೆ ಏರಿಕೆಯಿಂದ ತೊಂದರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇತ್ತು. ಯಾವುದನ್ನು ಮುಟ್ಟಿದರೂ ಬೆಲೆ ಏರಿಕೆ ಬಿಸಿ ಅನುಭವಿಸಬೇಕಿತ್ತು. ಅದಕ್ಕೆ ನಾವು ಸಂಸಾರ ಸುಗಮವಾಗಿ ಸಾಗಲು ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಲಾಯಿತು ಎಂದು ಹೇಳಿದರು.
ಇಡೀ ರಾಜ್ಯದಾದ್ಯಂತ ನಾವು ನೀಡುತ್ತಿರುವ ಎಲ್ಲಾ ಯೋಜನೆಗಳನ್ನು ಲೆಕ್ಕ ಹಾಕಿದರೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಜನರ ಕಲ್ಯಾಣಕ್ಕೆ ಕಾಂಗ್ರೆಸ್ ನೀಡುತ್ತಿದೆ. ನಾವು ಜಾತಿ ಬಗ್ಗೆ ಚಿಂತನೆ ಮಾಡುವವರಲ್ಲ, ನೀತಿ ಬಗ್ಗೆ ಯೋಚನೆ ಮಾಡುವವರು. ಇಲ್ಲಿ ಇರುವ ಹೆಚ್ಚಿನ ಜನ ಹಿಂದುಗಳು. ನಾವು ಬಿಜೆಪಿಯವರಂತೆ ಹಿಂದು ಮಾತ್ರ ಮುಂದು ಎಂದು ಹೇಳುವುದಿಲ್ಲ. ಸಮಾಜದ ಎಲ್ಲಾ ಜಾತಿ, ವರ್ಗದವರು ಸೇರಿ ಒಂದು ಎನ್ನುವವರು. ನಾವು ಯಾವುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದವರಲ್ಲ ಎಂದರು.
ಸಂವಿಧಾನವನ್ನು ಒಂದಷ್ಟು ಜನ ದುರುಪಯೋಗ ಮಾಡಿಕೊಳ್ಳಬಹುದು ಆದರೆ ಅದು ತಾತ್ಕಾಲಿಕ. ಕಾಂಗ್ರೆಸ್ ಪಕ್ಷದ ಇರುವುದೇ ಸಂವಿಧಾನ ಹಾಗೂ ದೇಶದ ಜನರನ್ನು ರಕ್ಷಣೆ ಮಾಡಲು. ನೆಹರು ಕುಟುಂಬ ತಮ್ಮ ಆಸ್ತಿಗಳನ್ನೇ ಈ ದೇಶಕ್ಕೆ ನೀಡಿದೆ. ಸೋನಿಯಾ ಗಾಂಧಿ ಅವರು ನನಗೆ ಅಧಿಕಾರ ಬೇಡ ಎಂದು ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ನೀಡಿ ದೇಶದ ಉಳಿವಿಗಾಗಿ ಪಣ ತೊಟ್ಟವರು. ಇಡೀ ಪ್ರಪಂಚದಲ್ಲಿ ಇಂತಹ ತ್ಯಾಗ ಮತ್ತೊಂದಿಲ್ಲ ಎಂದು ಹೇಳಿದರು.
ಭವ್ಯವಾದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಇರುವುದೇ ನಮ್ಮ ಭಾಗ್ಯ. ಯಾವುದೇ ಸ್ಥಾನಮಾನ ಬೇಡ ಎಂದು ಹೇಳಿದ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದ ಲಲಿತಾ ನಾಯಕ್ ತಾಯಿಗೆ ಹಾಗೂ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದರು.