ಕಲಬುರಗಿಯಲ್ಲಿ ಜನರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟಿ ಕೋಟಿ ರೂ. ವಂಚನೆ ಮಾಡಿ ಪರಾರಿಯಾಗಿರುವ ವಂಚಕನನ್ನು ಹೈದರಾಬಾದ್‌ನಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ತೆಲಂಗಾಣ ಮೂಲದ ರಾಮು ಅಕುಲ್ ಹೂಡಿಕೆ ಮಾಡಿದ ಹಣಕ್ಕೆ ತಿಂಗಳಿಗೆ 15-20% ಲಾಭ ಕೊಡುವುದಾಗಿ ನಂಬಿಸಿದ್ದ. ವಿನಸ್ ಎಂಟರ್ಪ್ರೈಸಸ್ ಹೆಸರಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ 20 ಸಾವಿರ ಲಾಭ ನೀಡುವುದಾಗಿ ಹೇಳಿದ್ದ. ಗ್ರಾಹಕರನ್ನು ತಂದು ಕೊಡುತ್ತಿದ್ದ ಮಧ್ಯವರ್ತಿಗಳಿಗೆ 15% ಹಣ ಕೊಡುತ್ತಿದ್ದ.
ಆರೋಪಿಯು ರಿಯಲ್ ಎಸ್ಟೇಟ್, ಆಗ್ರೋ ಇಂಡಸ್ಟ್ರಿ, ಮ್ಯೂಚುವಲ್ ಫಂಡ್, ಆನ್ ಲೈನ್ ಟ್ರೇಡಿಂಗ್ ನಲ್ಲಿ ಇನ್ವೆಸ್ಟ್ಮೆಂಟ್ ಮಾಡುವುದಾಗಿ ಹೇಳಿ ಜನರನ್ನು ನಂಬಿಸಿದ್ದ. ಆರಂಭದಲ್ಲಿ ಹಣ ಹೂಡಿಕೆ ಮಾಡಿದವರಿಗೆ 20% ಬಡ್ಡಿ ಲಾಭಾಂಶ ನೀಡಿದ್ದ. ಕಲಬುರಗಿ ನಗರದ ಹೈಕೋರ್ಟ್ ಬಳಿ ಅಕ್ಕಮಹಾದೇವಿ ಕಾಲೋನಿಯಲ್ಲಿ ವಿನಸ್ ಎಂಟರ್ಪ್ರೈಸಸ್ ಹೆಸರಲ್ಲಿ ಹೈಟೆಕ್ ಕಚೇರಿ ತೆರೆದಿದ್ದ. 10-12ಸಿಬ್ಬಂದಿ ಇಟ್ಟುಕೊಂಡು ವಂಚನೆ ದಂಧೆ ನಡೆಸುತ್ತ ಕಲಬುರಗಿ ನಗರ, ಸೇಡಂ, ಶಾಹಪುರ, ಯಾದಗಿರಿ, ಬೀದರ್, ವಿಜಯಪುರ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಚೇರಿ ತೆರೆದಿದ್ದ. ಕಲಬುರಗಿ ಜಿಲ್ಲೆಯಲ್ಲೇ ಬರೋಬ್ಬರಿ 200 ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾನೆ.
800 ಕ್ಕೂ ಹೆಚ್ಚು ಜನ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದರು. ಜನರ ಬಳಿ ಹಣ ಪಡೆಯುವಾಗ ಅಗ್ರಿಮೆಂಟ್ ಮಾಡಿ ಹಾಗೂ ಮುಂಗಡ ಚೆಕ್ ನೀಡುತ್ತಿದ್ದ. ಕೆಲವರು ಒಂದು ಲಕ್ಷ ಹೂಡಿಕೆ ಮಾಡಿದ್ರೆ ಮತ್ತೆ ಕೆಲವು ಒಂದೂ ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿದ್ದರು. ಮಹಿಳೆಯರು ಹೆಚ್ಚಿನ ಬಡ್ಡಿ ಆಸೆಗೆ ಮಾಂಗಲ್ಯ ಮಾರಿ ಹೂಡಿಕೆ ಮಾಡಿದ್ದರು. ಹಲವರು ಗಂಡಂದಿರಿಗೆ ಗೊತ್ತಿಲ್ಲದೆ ಹಣ ಹೂಡಿಕೆ ಮಾಡಿದ್ದರು. ವಿಜಯಪುರ ಮೂಲದ ಉಲ್ಲಾಸ್ ನೇಲ್ಲಗಿ ಎಂಬಾತ 1.7 ಕೋಟಿ ಹಣ ಹೂಡಿಕೆ ಮಾಡಿದ್ದರು. ಉಲ್ಲಾಸ್ ಸೇನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.