ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಕಾವೇರಿ ವೋಲ್ವೊ ಬಸ್ ಮೇಲೆ ಸಂಚಾರಿ ನಿಯಮ ಉಲ್ಲಂಘನೆಯ ಹಲವು ಪ್ರಕರಣಗಳು ಇದ್ದು, 23 ಸಾವಿರ ರೂ. ದಂಡದ ಚಲನ್ ಗಳಿದ್ದವು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಶುಕ್ರವಾರ ಮುಂಜಾನೆ ಹೈದರಾಬಾದ್ ನ ಕರ್ನೂಲ್ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಪ್ರಯಾಣಿಕರು ಸಜೀವದಹನಗೊಂಡಿದ್ದರೆ, 11ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಅಪಘಾತದ ನಂತರ ಬಸ್ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಬಸ್ ಮೇಲೆ ಹಲವು ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳು ಇದ್ದು, 23 ಸಾವಿರ ರೂ. ದಂಡ ಪಾವತಿಗೆ ಚಲನ್ ನೀಡಿರುವುದು ಬೆಳಕಿಗೆ ಬಂದಿದೆ.
ತೆಲಂಗಾಣ ಮತ್ತು ಕರ್ನಾಟಕದ ನಡುವೆ ಸಂಚರಿಸುತ್ತಿದ್ದ ಬಸ್ ಓಡಿಶಾ ಮೂಲದಾಗಿದ್ದು, ಫಿಟ್ನೆಸ್ ಪರೀಕ್ಷೆ, ಪರವಾನಗಿ ಸೇರಿದಂತೆ ಎಲ್ಲಾ ದಾಖಲೆಗಳು ಓಡಿಶಾ ಮೂಲದ್ದಾಗಿದ್ದು, ಯಾವ ದಾಖಲೆಯೂ ಸಮರ್ಪಕವಾಗಿ ಇಲ್ಲ ಎಂಬುದು ತಿಳಿದು ಬಂದಿದೆ.
ಅಪಾಯಕಾರಿ ಚಾಲನೆ, ಏಕಮುಖ ಮಾರ್ಗದಲ್ಲಿ ವಾಹನ ಚಾಲನೆ ಸೇರಿದಂತೆ ಹಲವು ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಚಲನ್ ಗಳು ಬಸ್ ಮೇಲಿವೆ. ಬಹುತೇಕ ಸಂಚಾರ ನಿಯಮ ಉಲ್ಲಂಘನೆಗಳು ತೆಲಂಗಾಣದಲ್ಲಿ ನಡೆದಿವೆ.


