ಬೆಂಗಳೂರಿನಲ್ಲಿ ಚಿಟ್ ಫಂಡ್ ಹೆಸರಿನಲ್ಲಿ ಕೋಟಿ ಕೋಟಿ ವಂಚಿಸಿರುವ ಪ್ರಕರಣ ಬಹಿರಂಗಗೊಂಡಿದೆ. ನವಶಕ್ತಿ ಚಿಟ್ ಫಂಡ್ ಹೆಸರಿನಲ್ಲಿ ನೂರಾರು ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಕೋಟ್ಯಾಂತರ ರೂಪಾಯಿ ವಂಚಿಸಲಾಗಿದೆ. ಮೋಸ ಹೋಗಿ ಹಣ ಕಳೆದುಕೊಂಡವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಆದರೆ ಎಲ್ಲೂ ನ್ಯಾಯ ಸಿಗುತ್ತಿಲ್ಲ ಎಂದು ಸಂತ್ರಸ್ತರು ಗೃಹಸಚಿವರ ಮೊರೆ ಹೋಗಿದ್ದಾರೆ. ಸಿಐಡಿ ಮೂಲಕ ಸರಿಯಾದ ತನಿಖೆ ಮಾಡಿ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಕಷ್ಟಪಟ್ಟು ದುಡಿದ ಒಂದೊಂದು ರೂಪಾಯಿ ಕೂಡಿಟ್ಟವರು ಇಂದು ಬೀದಿಪಾಲಾಗಿದ್ದಾರೆ. ಈ ವಂಚನೆಯಿಂದ ನೊಂದ ಮಹಿಳೆಯೊಬ್ಬರು ಆತ್ಮಹತ್ಯೆಗೂ ಯತ್ನಿಸಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ ಈ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿದೆ. ಮಾನಸ ಕೃಷ್ಣಪ್ಪ ಹಾಗೂ ರವಿಕುಮಾರ್ ನವಶಕ್ತಿ ಚಿಟ್ ಫಂಡ್ ಅಧ್ಯಕ್ಷ ಶರವಣ, ವೈಸ್ ಪ್ರೆಸಿಡೆಂಟ್ ರಾಘವೇಂದ್ರ ಸೇರಿ ಸಿಬ್ಬಂದಿ ವಿರುದ್ಧ 300ಕ್ಕೂ ಹೆಚ್ಚು ಜನರಿಗೆ ವಂಚಿಸಿರುವುದಾಗಿ ದೂರು ದಾಖಲಿಸಿದ್ದಾರೆ. ಒಬ್ಬೊಬ್ಬರಿಂದ ಎರಡು ಕೋಟಿ, 50 ಲಕ್ಷ ಈ ರೀತಿ ಹಣ ಪಡೆದು ವಂಚಿಸಲಾಗಿದೆ ಎಂದು ತಿಳಿಸಿದ್ದಾರೆ.