ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ನಡೆದ ಮತ ಕಳ್ಳತನ ಪ್ರಕರಣದ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಹಲವು ಮಹತ್ವದ ವಿಚಾರಗಳು ಬಯಲಾಗಿವೆ. ಮತದಾರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು 6,018 ನಕಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೆಸರು ಕೈ ಬಿಡಲು ಸಲ್ಲಿಕೆಯಾದ ಒಂದು ಅರ್ಜಿ ಸಂಬಂಧ ಡೇಟಾ ಸೆಂಟರ್‌ಗೆ 80 ರೂಪಾಯಿ ಪಾವತಿಯಾಗಿತ್ತು, ಹೀಗೆ ಡೇಟಾ ಸೆಂಟರ್ 4.8 ಲಕ್ಷ ರೂ. ಪಡೆದಿತ್ತು ಎಂಬುದು ಪತ್ತೆಯಾಗಿದೆ.
ಮತದಾರನ ಹೆಸರು ಪಟ್ಟಿಯಿಂದ ತೆಗೆದು ಹಾಕಲು ಮೊಹಮ್ಮದ್ ಅಶ್ಫಾಕ್ ನೇತೃತ್ವದ ಗ್ಯಾಂಗ್ ನೂರಾರು ಸಿಮ್ ಕಾರ್ಡ್‌ಗಳು ಮತ್ತು ಕೋಳಿ ಫಾರಂ ಕೆಲಸಗಾರರ ಮೊಬೈಲ್ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಬಹಿರಂಗಗೊಂಡಿದೆ. 20ಕ್ಕೂ ಹೆಚ್ಚು ಮಂದಿಯನ್ನು ಎಸ್ಐಟಿ ಈಗಾಗಲೇ ವಿಚಾರಣೆ ನಡೆಸಿದೆ.
ನೂರಾರು ಸಿಮ್ ಕಾರ್ಡ್ ಖರೀದಿಸಿದ ಗ್ಯಾಂಗ್ ಅವುಗಳ ನಂಬರ್ ಕೊಟ್ಟು ಮತದಾರರ ಹೆಸರು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಿತ್ತು, ಕೋಳಿ ಫಾರಂ ಕೆಲಸಗಾರರ ಮೊಬೈಲ್ ಸಂಖ್ಯೆಯನ್ನು ಇದಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು.
ಮತದಾರರ ಹೆಸರು ಪಟ್ಟಿಯಿಂದ ಡಿಲಿಟ್ ಮಾಡಲು ಅರ್ಜಿ ಸಲ್ಲಿಸಬೇಕಿದ್ದರೆ ಅರ್ಜಿ ಸಲ್ಲಿಸಿದ ವ್ಯಕ್ತಿ ಕೂಡ ಅದೇ ಕ್ಷೇತ್ರದವನಾಗಿರಬೇಕು ಎಂಬ ನಿಯಮವಿದೆ. ಹೀಗಾಗಿ ಕೋಳಿ ಫಾರಂ ಕೆಲಸಗಾರರ ಮೊಬೈಲ್ ನಂಬರ್ ದುರ್ಬಳಕೆ ಮಾಡಲಾಗಿತ್ತು ಎಂಬುದು ಎಸ್‌ಐಟಿ ತನಿಖೆಯಲ್ಲಿ ತಿಳಿದು ಬಂದಿದೆ.
ಮೊಹಮ್ಮದ್ ಅಶ್ಫಾಕ್ ನೇತೃತ್ವದಲ್ಲಿಯೇ ಇಡೀ ಮತಕಳವು ಪ್ರಕರಣ ನಡೆದಿದ್ದು, ದುಬೈಯಲ್ಲಿರುವ ಅಶ್ಫಾಕ್ ಸೇರಿ ಆರು ಜನರನ್ನು ಎಸ್ಐಟಿ ಬಂಧಿಸುವ ಸಾಧ್ಯತೆ ಇದೆ. ಅಶ್ಪಾಕ್ಗೆ ಈ ಡೀಲ್ ನೀಡಿದ್ದು ಯಾರು ಎಂಬುದರ ಬಗ್ಗೆ ಎಸ್ಐಟಿ ಮಾಹಿತಿ ಕಲೆ ಹಾಕುತ್ತಿದೆ.
ಆಳಂದ ಮತ ಕಳವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, 2022 ರ ಫೆಬ್ರವರಿ ಮತ್ತು 2023 ರ ಫೆಬ್ರವರಿ ನಡುವೆ ಆಳಂದ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಲು ಬಳಸಲಾಗಿದೆ ಎಂದು ವರದಿಯಾಗಿರುವ ಪೋರ್ಟಲ್ಗಳು, ಐಪಿ ಅಡ್ರೆಸ್ ಮತ್ತು OTP ಟ್ರೇಲ್‌ಗಳಂತಹ ವಿವರಗಳನ್ನು ಕೋರಿದೆ ಎಂದು ಮೂಲವೊಂದು ತಿಳಿಸಿದೆ.
ಆಳಂದ ಮತಗಳ್ಳತನದ ಬಗ್ಗೆ ನಾವು ಹೇಳುತ್ತಿರುವುದನ್ನೇ ಎಸ್ಐಟಿ ತನಿಖೆಯಲ್ಲಿ ದೃಢಪಡಿಸಿದೆ. ತನಿಖೆ ಬಿಜೆಪಿ ನಾಯಕರು ಮತ್ತು ಸಹಚರರು ನಡೆಸಿದ ಅಕ್ರಮವನ್ನು ಬಯಲುಗೊಳಿಸಲಿದೆ. ಬಿಜೆಪಿಯ ವೋಟ್ ಚೋರಿ ಪ್ಲೇಬುಕ್‌ನ ಪ್ರತಿಯೊಂದು ಕೊಳಕು ತಂತ್ರ ಮತ್ತು ಕಾರ್ಯವೈಖರಿಯನ್ನು ಬಹಿರಂಗಪಡಿಸಲಾಗುವುದು. ಇದರ ಹಿಂದಿನ ಪ್ರತಿಯೊಬ್ಬ ವ್ಯಕ್ತಿಯನ್ನು ಜೈಲಿಗೆ ಕಳಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


