ಗಾಣಗಾಪುರ ದತ್ತಾತ್ರೇಯ ಕ್ಷೇತ್ರದಲ್ಲಿ ಗುರುವಾರ ಗುರುಪೂರ್ಣಿಮೆ ನಿಮಿತ್ತ ಗುರು ದರ್ಶನ ಮಾಡಲು ಭಕ್ತರು ಸರತಿಯಲ್ಲಿ ಕಾಯುತ್ತಿರುವಾಗ ನೂಕು ನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕಲಾವತಿ ಮೃತ ಮಹಿಳೆ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದ್ದಾರೆ.
ಗುರುಪೂರ್ಣಿಮೆ ಸಂಭ್ರಮದೊಂದಿಗೆ ಗುರು ಆರಾಧನೆಗಾಗಿ ಗಾಣಗಾಪುರದ ದತ್ತಾತ್ರೇಯ ದೇಗುಲಕ್ಕೆ ರಾಜ್ಯ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು. ಜನ ಹೆಚ್ಚಾಗುತ್ತಿದ್ದಂತೆ ಸಂಜೆಯ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದೆ.
ನೂಕುನುಗ್ಗಲು ನಡುವೆ ಸಂಜೆ 5.30ಕ್ಕೆ ಬಸವಕಲ್ಯಾಣ ತಾಲೂಕಿನ ಗೋಕುಲ ಗ್ರಾಮದ ಕಲಾವತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಅವರನ್ನು ಕಳಿಸಿದರೂ ಫಲಕಾರಿಯಾಗಿಲ್ಲ. ಈ ಸಂಬಂಧ ಗಾಣಗಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಇದು ಕಾಲ್ತುಳಿತದಿಂದ ಉಂಟಾದ ಸಾವೇ ಅಥವಾ ಕುಸಿದು ಬಿದ್ದು ಮೃತಪಟ್ಟಿರುವುದೇ ಎಂಬುದು ಗೊತ್ತಾಗಲಿದೆ.