Menu

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ ಬೆಂಕಿಗಾಹುತಿ: 25 ಮಂದಿ ಸಜೀವ ದಹನ

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಕರ್ನೂಲ್‌  ಚಿನ್ನಟೇಕೂರು ಬಳಿ ಬೈಕ್‌ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದಿದ್ದು, 25 ಮಂದಿ ಸಜೀವ ದಹನವಾಗಿದ್ದಾರೆ.

ಕಾವೇರಿ ಹೆಸರಿನ ವೋಲ್ವೋ ಬಸ್ಸಿನಲ್ಲಿ 44 ಪ್ರಯಾಣಿಕರಿದ್ದು, ಶುಕ್ರವಾರ ಬಳಗಿನ ಜಾವ ವೇಗವಾಗಿ ಬಂದ ಬೈಕ್‌ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಬೈಕ್‌ ಬಸ್ಸಿನ ಇಂಧನ ಟ್ಯಾಂಕ್‌ಗೆ ಬಡಿದಿದೆ. ಬೈಕ್‌ ಡಿಕ್ಕಿ ಬಡಿದ ರಭಸಕ್ಕೆ ಇಂಧನ ಟ್ಯಾಂಕ್‌ ಒಡೆದುಬೆಂಕಿ ಹೊತ್ತಿಕೊಂಡು ಇಡೀ ಬಸ್‌ ಧಗಧಗನೆ ಸುಟ್ಟು ಕರಕಲಾಗಿದೆ.

ಬಸ್ಸಿನಲ್ಲಿದ್ದ 12 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡವರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬಸ್ಸು ಬಹುತೇಕ ಸುಟ್ಟುಹೋಗಿತ್ತು. ಅಧಿಕಾರಿಗಳು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕೆಲಸ ಆರಂಭಿಸಿದ್ದಾರೆ. ಸ್ಲೀಪರ್‌ ಕೋಚ್‌ ಬಸ್‌ ಆಗಿದ್ದರಿಂದ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು. ವೋಲ್ವೋ ಬಸ್‌ ಕಿಟಕಿಯ ಗಾಜುಗಳು ಲಾಕ್‌ ಆಗಿರುತ್ತದೆ. ಹೀಗಿದ್ದರೂ ಬೆಂಕಿ ಕಾಣಿಸಿದ ಕೂಡಲೇ ಕೆಲವು ಪ್ರಯಾಣಿಕರು ಗಾಜನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

 

ಬಸ್‌ ಬೆಂಕಿಗಾಹುತಿಯಾಗಿ ಇಷ್ಟೊಂದು ಮಂದಿ ಪ್ರಾಣ ಕಲೆದುಕೊಂಡ  ದುರಂತದ ವಿಚಾರ ತಿಳಿದು ಆಘಾತವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದು, ಘಟನೆಯಲ್ಲಿ  ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

ಭೀಕರ ಬಸ್ ಅಪಘಾತದಲ್ಲಿ ಬಸ್‌ಗೆ ಬೆಂಕಿ‌ ತಗುಲಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಸುದ್ದಿ ಕೇಳಿ ಅತೀವ ದುಃಖವಾಯಿತು. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಕರ್ನೂಲು ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದು 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿರುವ ಸುದ್ದಿ ತಿಳಿದು ಆಘಾತವಾಯಿತು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಸಂತಾಪ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *