Menu

ಮಚ್ಚಿನಿಂದ ಕೊಚ್ಚಿ ತಂದೆ, ಅಣ್ಣನ ಕೊಲೆ ಮಾಡಿದ್ದ ತಮ್ಮ ಸೆರೆ

ಹಾಸನ:ಆಸ್ತಿ ಮಾರಾಟದ ಹಣ ಕೊಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಗನೊಬ್ಬ ತಂದೆ ಹಾಗೂ ಅಣ್ಣ ಇಬ್ಬರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಗಂಗೂರು ಗ್ರಾಮದ ತಂದೆ ದೇವೇಗೌಡ (70) ಹಾಗೂ ಅಣ್ಣ ಮಂಜುನಾಥ್ (50) ನನ್ನು ಕೊಲೆಗೈದು ಮನೆಯಲ್ಲೇ ಮಲಗಿದ್ದ ಮೋಹನ್ (47) ನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಹಾಗೂ ಮೋಹನ್ ಇಬ್ಬರು ಅವಿವಾಹಿತರಾಗಿದ್ದರು. ಮಂಜುನಾಥ್, ತಂದೆ-ತಾಯಿಯೊಂದಿಗೆ ವಾಸವಿದ್ದರು. ಆದರೆ ಮೋಹನ್ ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸವಿದ್ದ.

ತಂದೆ ದೇವೇಗೌಡ, ಕೆಲ ದಿನಗಳ ಹಿಂದೆ ಆಸ್ತಿ ಮಾರಾಟ ಮಾಡಿದ್ದರು. ಆಸ್ತಿ ಮಾರಾಟ ಮಾಡಿದ ಹಣ ನೀಡಿಲ್ಲ ಎಂದು ಮೋಹನ್ ಗಲಾಟೆ ಮಾಡಿದ್ದ. ಇದೇ ವಿಚಾರವಾಗಿ ಕೋಪಗೊಂಡಿದ್ದ ಮೋಹನ್, ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಡಿದ ಮತ್ತಿನಲ್ಲಿ ಮನೆಯ ಗೋಡೆ ನೆಗೆದು, ಮಲಗಿದ್ದ ಅಣ್ಣನ ಮೇಲೆ ಮಚ್ಚಿನಿಂದ ಹಲ್ಲೆ ಮಾಡುತ್ತಿದ್ದ ತಡೆಯಲು ಬಂದ ತಂದೆ ದೇವೇಗೌಡ ಮೇಲೆಯೂ ಮಚ್ಚಿನಿಂದ ಹಲ್ಲೆ ಮಾಡಿದ್ದ.

ಮಗನನ್ನ ತಡೆಯಲು ಬಂದ ತಾಯಿ ಜಯಮ್ಮನ ಮೇಲೂ ಮೋಹನ್ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಜಯಮ್ಮ, ಮನೆಯಿಂದ ಹೊರಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡು, ರಾತ್ರಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು.

ತಂದೆ ಹಾಗೂ ಸಹೋದರ ಕೊಲೆ ಮಾಡಿ ಮನೆಯ ಮತ್ತೊಂದು ಭಾಗದಲ್ಲಿ ಮೋಹನ್ ಮಲಗಿದ್ದ. ಬಳಿಕ ಅಪ್ಪ ಹಾಗೂ ಅಣ್ಣನನ್ನು ಕೊಲೆ ಮಾಡಿದ್ದೇನೆ. ನನಗೂ ಏಟಾಗಿದೆ ಬಂದು ಆಸ್ಪತ್ರೆಗೆ ಸೇರಿಸು ಎಂದು ಅಕ್ಕನಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಇದರಿಂದ ಗಾಬರಿಗೊಂಡ ಸಹೋದರಿ ಊರಿಗೆ ಬಂದಿದ್ದರು.

ಘಟನಾ ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೇತಾ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೊಲೆ ಮಾಡಿ ಮನೆಯಲ್ಲೇ ಮಲಗಿದ್ದ ಆರೋಪಿಯನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *