ಮೈಸೂರು: ನಾನು ಜೆಡಿಎಸ್ನಲ್ಲಿ ಇರಬೇಕಾ ಅಥವಾ ಬೇಡವಾ, ಬಿಜೆಪಿಗೆ ಹೋಗಬೇಕಾ ಅಥವಾ ಬೇಡವಾ ಇಲ್ಲವೇ, ಕಾಂಗ್ರೆಸ್ಗೆ ಹೋಗಬೇಕಾ ಅಥವಾ ಬೇಡವಾ ಎಂಬ ವಿಚಾರವನ್ನು ನನ್ನ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದಲ್ಲಿ ಇರಲಿ ಅಥವಾ ಹೋಗಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ನಾನು ಮುಂದೆ ಯಾವ ಪಕ್ಷಕ್ಕೆ ಸೇರಬೇಕು ಎಂಬ ಬಗ್ಗೆ ನನ್ನ ಕ್ಷೇತ್ರದ ಜನ ತೀರ್ಮಾನಿಸುತ್ತಾರೆ. ನಾನು ಎಂದಿಗೂ ಪಕ್ಷಾಂತರ ಮಾಡುವುದಿಲ್ಲ. ನನ್ನನ್ನು ಕಾಂಗ್ರೆಸ್ಗೆ ಬಂದು ಬಿಡು ಎಂದು ಸಿದ್ದರಾಮಯ್ಯ ಆಗಲಿ, ಡಿಕೆ ಶಿವಕುಮಾರ್ ಆಗಲಿ ಕರೆದಿಲ್ಲ. ಜೊತೆಗೆ ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ನನ್ನನ್ನ ಪ್ರಚಾರಕ್ಕೆ ಯಾರು ಕರೆಯಲಿಲ್ಲ. ಈ ನಡುವೆ ನನ್ನ ಮುಂದೆ ನಿಲ್ಲಲ್ಲು ಶಕ್ತಿ ಇಲ್ಲದವರು ಕೂಡ ನನ್ನ ಬಗ್ಗೆ ಮಾತನಾಡುತ್ತಾರೆ’ ಎಂದು ತಮ್ಮ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಮುಂದೆ ನಾನು ಏನು ಮಾಡಬೇಕು ಎಂದು ನನ್ನ ಕ್ಷೇತ್ರದ ಜನರನ್ನು ಕೇಳುತ್ತೇನೆ. ಜೆಡಿಎಸ್ನಲ್ಲಿ ಇರು ಎಂದರೆ ಇರುತ್ತೇನೆ. ಅಥವಾ ಕಾಂಗ್ರೆಸ್ಗೆ ಹೋಗು ಎಂದರೆ ಹೋಗುತ್ತೇನೆ. ಇಲ್ಲವೆ, ಬಿಜೆಪಿಗೆ ಸೇರಿಕೊಳ್ಳಿ ಅಂತ ಅಂದರೂ ಸೇರಿಕೊಳ್ಳುತ್ತೇನೆ. ಜನರ ತೀರ್ಮಾನವನ್ನು ನೋಡಿಕೊಂಡು ಮುಂದುವರೆಯುತ್ತೇನೆ. ಜನರ ಅಭಿಪ್ರಾಯದ ಮೇಲೆ ಯಾವ ಪಕ್ಷದಿಂದ ಆದರೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಅವರು ಹೇಳಿದರು.
ಜೆಡಿಎಸ್ ಶಾಸಕಾಂಗ ನಾಯಕನ ಸ್ಥಾನ ಕೊಡಲಿಲ್ಲ ಅಂತ ಬೇಸರ: ನಾನು ಜೆಡಿಎಸ್ ಶಾಸಕನಾಗಿ ಚುನಾವಣೆಯಲ್ಲಿ ಗೆದ್ದ ಬಳಿಕ ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿಲ್ಲ. ನನ್ನ ಅವಧಿ ಮುಗಿಯುವವರೆಗೂ ಇಲ್ಲೆಯೇ ಇರುತ್ತೇನೆ. ಆದರೆ, ಹಿರಿಯನಾದ ನನಗೆ ಜೆಡಿಎಸ್ ಶಾಸಕಾಂಗ ನಾಯಕನ ಸ್ಥಾನ ಕೊಡಲಿಲ್ಲ ಅಂತ ಬೇಸರ ಇದೆ. ನನ್ನನ್ನ ಬಿಟ್ಟು ಕುಮಾರಸ್ವಾಮಿ ಅವರು ಸುರೇಶ್ ಬಾಬು ಅವರಿಗೆ ಕೊಟ್ಟರು. ಸದ್ಯ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಜೆಡಿಎಸ್ ಪಕ್ಷದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸಿದ್ದರಾಮಯ್ಯ ಅವರಂತಹ ದೊಡ್ಡ ನಾಯಕರ ಮುಂದೆ ಚುನಾವಣೆಯಲ್ಲಿ ನಿಂತು ಗೆದ್ದಿದ್ದೇನೆ. ಸದ್ಯ ಅರ್ಧದಲ್ಲಿ ಜೆಡಿಎಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದರು.
ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷರ ಪಟ್ಟ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ, ನಿಖಿಲ್ ಕುಮಾರಸ್ವಾಮಿ ಮೂರು ಚುನಾವಣೆಯಲ್ಲಿ ಸೋತಿದ್ದಾರೆ. ಇದರಿಂದ ಅವರಿಗೆ ರಾಜಕೀಯ ಅನುಭವ ಇದೆ. ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷವನ್ನು ಮುಂದೆ ತೆಗೆದುಕೊಂಡು ಹೋಗುವ ಶಕ್ತಿ ನಿಖಿಲ್ಗೆ ಇದೆ. ನಾನು ಪಕ್ಷದ ಕಾರ್ಯಕ್ರಮಗಳಿಂದ ದೂರ ಇದ್ದೇನೆ. ಶಾಸಕನಾಗಿ ಮಾತ್ರ ಕೆಲಸ ಮಾಡುತ್ತಿರುವೆ ಎಂದರು.
ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಏನಾಯಿತು ಅಂತ ಸಚಿವ ರಾಜಣ್ಣ ಮಾತನಾಡಿದ್ದಾರೆ. ಕಾನೂನು ಉಲ್ಲಂಘನೆ ಆಗಿದೆ ಎಂದು ಕೋರ್ಟ್ಗೆ ಹೋಗಿದ್ದಾರೆ. ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ. ಸಹಕಾರಿ ಕ್ಷೇತ್ರದ ಬಗ್ಗೆ ಹಸ್ತಕ್ಷೇಪ ಮಾಡಲ್ಲ ಎಂದು ಇದೆ ವೇಳೆ ಹೇಳಿದರು.