ಬೆಂಗಳೂರು: ರಾಜ್ಯಕ್ಕೆ ಹಿಡಿದಿರುವ ದೊಡ್ಡ ಗ್ರಹಣವೆಂದರೆ ಕಾಂಗ್ರೆಸ್ ಆಡಳಿತ. ಇನ್ನು ಉಳಿದ ಎರಡೂವರೆ ವರ್ಷದ ನಂತರ ರಾಜ್ಯಕ್ಕೆ ಗ್ರಹಣ ಮುಕ್ತಿಯಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷಗಳ ನಂತರ ಕರ್ನಾಟಕ ಸೂರ್ಯ ಚಂದ್ರ ಇರುವವರೆಗೂ ಪ್ರಕಾಶಮಾನವಾಗಿ ಬೆಳಗುತ್ತದೆ ಎಂದು ನುಡಿದರು.
ಸಿದ್ದರಾಮಯ್ಯ ಅವರೇ, ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ನಿಮ್ಮ ಆಡಳಿತ. ನೀವು ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷವಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳಿಂದ ಜನರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ನಿಮ್ಮ ಆಡಳಿತ ಎಷ್ಟು ಚೆನ್ನಾಗಿದೆ ಎಂಬುದಕ್ಕೆ ಬೆಂಗಳೂರಿನ ರಸ್ತೆ ಗುಂಡಿಗಳೇ ಸಾಕ್ಷಿ ಎಂದು ವ್ಯಂಗ್ಯವಾಡಿದರು.
ಅಮಾವಾಸ್ಯೆ- ಹುಣ್ಣಿಮೆಗೆ ವ್ಯತ್ಯಾಸ ತಿಳಿದಿಲ್ಲ..
ಸಿದ್ದರಾಮಯ್ಯ ಅವರು ಹಿರಿಯರು ಹಾಗೂ ಲೋಕಾನುಭವ ಹೊಂದಿರುವವರು. ಅಮಾವಾಸ್ಯೆಗೂ ಮತ್ತು ಹುಣ್ಣಿಮೆಗೂ ಅವರಿಗೆ ವ್ಯತ್ಯಾಸ ಗೊತ್ತಿಲ್ಲ. ಅಮಾವಾಸ್ಯೆ ದಿನವು ಸೂರ್ಯ ಇರುತ್ತಾನೆ; ಹುಣ್ಣಿಮೆ ದಿನವೂ ಸೂರ್ಯ ಇರುತ್ತಾನೆ. ವರ್ಷದ 365 ದಿನವೂ ಪ್ರಕಾಶಮಾನವಾಗಿರುವುದು ಸೂರ್ಯನೇ ಎಂದು ತೇಜಸ್ವಿ ಸೂರ್ಯ ಅವರು ಹೇಳಿದರು.
ಅಮಾವಾಸ್ಯೆ ದಿನ ಇಲ್ಲದಿರುವವನು ಚಂದ್ರ; ಸಿದ್ದರಾಮಯ್ಯ ಅವರೇ ಸೂರ್ಯನಲ್ಲ. ಚಂದ್ರನನ್ನು ನೋಡಿ ಪೂಜೆ ಮಾಡುವ ಜನರೊಂದಿಗೆ ಅವರು ಇದ್ದು ಇದ್ದು, ಅಮಾವಾÀಸ್ಯೆ ಮತ್ತು ಹುಣ್ಣಿಮೆಗೆ ಸೂರ್ಯ ಇರುವುದಿಲ್ಲ ಎಂಬ ಗೊಂದಲದಲ್ಲಿ ಅವರು ಇದ್ದಾರೆ ಎಂದು ಟೀಕಿಸಿದರು.
ಚಂದ್ರ ಯಾವತ್ತು ಇರುತ್ತಾನೆ; ಯಾವತ್ತು ಇರುವುದಿಲ್ಲ, ಪೂರ್ತಿ ಚಂದ್ರನಿದ್ದಾನೇಯೇ ಅಥವಾ ಅರ್ಧ ಚಂದ್ರನಿದ್ದಾನೆಯೇ; ನಮ್ಮ ಊರಿನಲ್ಲಿ ಚಂದ್ರ ಕಾಣಿಸಿದ್ದಾನೋ; ಬೇರೆ ಊರಿನಲ್ಲಿ ಕಾಣಿಸಿದ್ದಕ್ಕೆ ಇಲ್ಲಿ ಪೂಜೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದೆಲ್ಲವನ್ನು ಮಾಡುವುದು ನಾವಲ್ಲ. ನಮಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನವೂ ಲಕ್ಷ್ಮೀ ಪೂಜೆಯನ್ನು ಮಾಡುತ್ತೇವೆ ಎಂದು ವಿವರಿಸಿದರು.
ಸೂರ್ಯ ಮತ್ತು ಚಂದ್ರರನ್ನು ಪೂಜಿಸುವ ವ್ಯತ್ಯಾಸ ಹಾಗೂ ಅಮವಾಸ್ಯೆ ಹಾಗೂ ಹುಣ್ಣಿಮೆಗೂ ವ್ಯತ್ಯಾಸ ತಿಳಿದುಕೊಂಡು ಮುಂದೆ ಈ ರೀತಿ ಹೇಳಿಕೆಗಳನ್ನು ಕೊಡಿ ಎಂದು ತಿಳಿಸಿದರು. ಸೂರ್ಯ ಹುಣ್ಣಿಮೆ ದಿನ ಎಷ್ಟು ಪ್ರಕಾಶಮಾನವಾಗಿ ಇರುತ್ತಾನೆ, ಅಷ್ಟೇ ಪ್ರಕಾಶಮಾನವಾಗಿ ಅಮಾವಾಸ್ಯೆ ದಿನವೂ ಇರುತ್ತಾನೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಇಂಥ ಟೀಕೆ ನನ್ನ ಪಕ್ಷದ ಸಂಸ್ಕಾರವಲ್ಲ..
ಸಿದ್ದರಾಮಯ್ಯ ಅವರ ಬಗ್ಗೆ ನಾನೂ ಟೀಕಿಸಬಹುದು. ಆದರೆ ನನ್ನನ್ನು 24 ಲಕ್ಷ ಜನ ಸಂಸದನಾಗಿ ಆಯ್ಕೆ ಮಾಡಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವಾಗ ಆ ರೀತಿಯ ಮಾತು ನನಗೆ ಶೋಭೆ ತರುವುದಿಲ್ಲ ಹಾಗೂ ನನ್ನ ಮತ್ತು ಪಕ್ಷದ ಸಂಸ್ಕಾರ ಅಲ್ಲ ಎಂದು ತಿಳಿಸಿದರು.
ಹಬ್ಬಗಳಿಗೆ ಜನರು ಊರಿಗೆ ಹೋಗಿ ಬಂದರು. ರಾಷ್ಟ್ರೀಯ ಹೆದ್ದಾರಿ ಮುಗಿದು ರಾಜ್ಯದ ರಸ್ತೆ ಪ್ರಾರಂಭವಾದ ಬಳಿಕ ಶುರುವಾದ ರಸ್ತೆ ಗುಂಡಿಗಳು ಮತ್ತೆ ರಾಷ್ಟ್ರೀಯ ಹೆದ್ದಾರಿ ಬರುವವರೆಗೂ ಗುಂಡಿಗಳೇ ಗುಂಡಿಗಳು. ಇದು ನಿಮ್ಮ ಆಡಳಿತದ ವೈಖರಿ ಎಂದು ಟೀಕಿಸಿದರು. ಈ ರೀತಿ ರಾಜ್ಯ ಮತ್ತು ಬೆಂಗಳೂರಿನಲ್ಲಿ ಅವ್ಯವಸ್ಥೆ ಇದೆ. ನೀವು ಮೋದಿ ಜೀ ಬಗ್ಗೆ ಮಾತನಾಡುತ್ತೀರ ಎಂದು ಕೇಳಿದರು.
ಬೆಟ್ಟಿಂಗ್‍ನಲ್ಲಿ ನಿರತ ಗೃಹ ಸಚಿವರು..
ಕಳೆದ ಒಂದು ವಾರದಲ್ಲಿ ಬಸವನಗುಡಿ, ಮಲ್ಲೇಶ್ವರ, ಗಂಗೊಂಡನಹಳ್ಳಿಯಲ್ಲಿ 3 ಜನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕೊಲೆ ಆಗಿದೆ. ಅವರದ್ದೇ ಕ್ಷೇತ್ರದ ಮೈಸೂರಿನಲ್ಲಿ 9 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಆಗಿದೆ. ನಿಮ್ಮ ಗೃಹ ಸಚಿವರು ದೀಪಾವಳಿಯ ಬೆಟ್ಟಿಂಗ್‍ನಲ್ಲಿ ಕಾರ್ಯನಿರತರಾಗಿದ್ದಾರೆ. ಇದು ನಿಮ್ಮ ಆಡಳಿತದ ವೈಖರಿ ಎಂದು ಆರೋಪಿಸಿದರು.
ರಾಜಧಾನಿಯಲ್ಲಿ ಒಂದು ವಾರದೊಳಗೆ 3 ಅತ್ಯಾಚಾರ ಮತ್ತು ಕೊಲೆ ಆಗಿದೆ. ಅದಕ್ಕೆ ಮುಖ್ಯಮಂತ್ರಿಗಳಾಗಲೀ, ಉಪಮುಖ್ಯಮಂತ್ರಿಗಳಾಗಲೀ, ಗೃಹ ಸಚಿವರು ಮತ್ತು ಸಚಿವರಾದಿಯಾಗಿ ಯಾರೂ ಅದರ ವಿರುದ್ಧ ಪ್ರಶ್ನೆಯೇ ಎತ್ತುವುದಿಲ್ಲ ಎಂದು ದೂರಿದರು. ಕಾಂಗ್ರೆಸ್ ಆಡಳಿತ ನೋಡಿ 15 ಬಿಲಿಯನ್ ಡಾಲರ್ ಹೂಡಿಕೆಯನ್ನು ರಾಜ್ಯ ಕಳೆದುಕೊಂಡಿದ್ದು, ಅದು ಆಂಧ್ರದ ಪಾಲಾಗಿದೆ. ರಾಜ್ಯ ಅಭಿವೃದ್ಧಿ ಮಾಡುವುದನ್ನು ಬಿಟ್ಟು ನಿಮ್ಮ ಐ.ಟಿ. ಸಚಿವರು ಆರ್.ಎಸ್.ಎಸ್. ನಿಷೇಧಿಸಲು ಕಾರ್ಯನಿರತರಾಗಿದ್ದು, ಗೃಹ ಸಚಿವರು ಬೆಟ್ಟಿಂಗ್‍ನಲ್ಲಿ ಕಾರ್ಯನಿರತರಾಗಿದ್ದಾರೆ ಆರೋಪಿಸಿದರು.
ಕಾಂಗ್ರೆಸ್ ಆಡಳಿತ ವಿಫಲತೆಗೆ ಪ್ರಧಾನಿ ಕಾರಣರೇ?
ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಪ್ರತೀ ಬಾರಿಯೂ ಮೋದಿ ಜೀ ಮತ್ತು ಸಂಸದರನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಎರಡೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ಮೋದಿ ಜೀ ಅವರು ಕಾರಣವೇ?; ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಸಂಸ್ಥೆಗಳ ನೌಕರರ ಸಂಬಳ ನೀಡಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಮೋದಿ ಜೀ ಅವರು ಕಾರಣರೇ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ ಧಾರವಾಡದಲ್ಲಿ ಸಾವಿರಾರು ಯುವಕರು ಸರ್ಕಾರಿ ಹುದ್ದೆ ಮತ್ತು ಶಿಕ್ಷಕರ ಹುದ್ದೆ ಭರ್ತಿ ಮಾಡುತ್ತಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ತೆರಿಗೆ ನೆಪದಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರಕ್ಕೆ ಬರುತ್ತಿರುವ ಹಣ ರಾಜ್ಯದ ಜನರಿಗೆ ಉಪಯೋಗವಾಗದೆ ಬಿಹಾರ ಚುನಾವಣೆಗೆ ಉಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಆಡಳಿತದಿಂದ 7 ಜನ ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದು, ಗುತ್ತಿಗೆದಾರರಿಗೆ ಕೆಲಸಕ್ಕೆ ಹಣ ಬಿಡುಗಡೆ ಮಾಡಿಲ್ಲವೆಂದು ಬೀದಿಗಿಳಿದಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಸರ್ಕಾರ ಆಡಳಿತ ಬಿಟ್ಟು ಹೊರಡುವ ಸಮಯದಲ್ಲಿ ಮಿಗತೆ ಬಜೆಟ್ ಅನ್ನು ನೀಡಿದ್ದೆವು, ಇಂದು ದೇಶದಲ್ಲಿ ಅತೀ ಹೆಚ್ಚು ಸಾಲ ಮಾಡಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಇದೆ. ರಾಜ್ಯದ 100 ರೂ. ಆದಾಯದಲ್ಲಿ 18 ರೂ. ಬಡ್ಡಿ ಕಟ್ಟುವ ಪರಿಸ್ಥಿತಿ ಇದೆ ಎಂದು ದೂರಿದರು.
ಜೈಲಿನಲ್ಲಿ ಇರುವ ಕಾಂಗ್ರೆಸ್ ಶಾಸಕರು ಬಿಟ್ಟು, ಬೇರೆ ಶಾಸಕರು ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದ ಬಜೆಟ್‍ನಲ್ಲಿ ರಸ್ತೆಗಳಿಗೆ, ಶಾಲಾ ಕಾಲೇಜು ಅಭಿವೃದ್ಧಿಗೆ, ನೀರಾವರಿಗೆ ಮತ್ತು ಆರೋಗ್ಯಕ್ಕೆ ಮೀಸಲಿಟ್ಟಿರುವ ಹಣಕ್ಕಿಂತ ಹೆಚ್ಚಿನ ದುಡ್ಡನ್ನು ಕಾಂಗ್ರೆಸ್ ಗ್ಯಾರಂಟಿಗೆ ಉಪಯೋಗಿಸುತ್ತಿದ್ದಾರೆ. ಆದಾಗ್ಯೂ ರಾಜ್ಯದ ಜನರಿಗೆ ಗ್ಯಾರೆಂಟಿ ಹಣ ಸರಿಯಾಗಿ ತಲುಪುತ್ತಿಲ್ಲ. ಗ್ಯಾರಂಟಿ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಕರ್ನಾಟಕದ ಜನರನ್ನು ಸ್ವಾಭಿಮಾನಿಯನ್ನಾಗಿ ಮಾಡುವುದನ್ನು ಬಿಟ್ಟು, ಸರ್ಕಾರದ ಮೇಲೆ ಅವಲಂಬಿತರನ್ನಾಗಿ ಮಾಡಿರುವುದು ನಿಮ್ಮ ಸರ್ಕಾರದ ಸಾಧನೆಯೇ ಎಂದು ಕೇಳಿದರು. ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಹೊಂದಿದ ನಂತರ ಕರ್ನಾಟಕಕ್ಕೆ ಅವರ ಕೊಡುಗೆ ಏನು ಎಂದು ನೆನಪಿಸಿಕೊಂಡರೆ ಶ್ರೀಮಂತ ಕರ್ನಾಟಕವನ್ನು ಬರಡು ಮಾಡಿ ಸಾಲದ ಕೂಪಕ್ಕೆ ಒಯ್ದದ್ದು ಎಂದು ನಿಮ್ಮ ಆಡಳಿತವನ್ನು ಜನ ನೆನಪಿಸಿಕೊಳ್ಳಬಾರದು ಎಂದು ತಿಳಿಸಿದರು.
ನಾಡು, ನೆಲ, ಭಾಷೆ ವಿಚಾರದ ಪರ ನಿಲ್ಲುತ್ತೇವೆ
ಕೇಂದ್ರದ ಅನುದಾನದ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದ ವಿಚಾರ ಬಂದಾಗ ಬಿಜೆಪಿ ಅಥವಾ ಬೇರೆ ಪಕ್ಷದ ಸಂಸದರು ಕರ್ನಾಟಕದ ಪರ ನಿಂತಿದ್ದೇವೆ ಎಂದರು. ಮುಂದೆಯೂ ನಾವು ಕರ್ನಾಟಕದ ಅಸ್ಮಿತೆ, ಗೌರವ, ನಾಡು, ಈ ನೆಲ ಭಾಷೆಗಳ ವಿಷಯ ಬಂದಾಗ ಯಾವುದೇ ರಾಜೀ ಮಾಡಿಕೊಳ್ಳದೆ ರಾಜ್ಯದ ಪರ ನಿಲ್ಲುವುದು ಬಿಜೆಪಿಯ ಸಂಸ್ಕøತಿ, ಅದನ್ನು ನಾವು ಮಡುತ್ತೇವೆ ಎಂದು ತಿಳಿಸಿದರು.