Menu

ಈ ನೆಲದ ನಿಜ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನ: ಗುರುಪೂರ್ಣಿಮೆ ಜ್ಞಾನಪಥದ ಬೆಳಕು

-ಸುಜಯ ಶೆಟ್ಟಿ,ಹಳ್ನಾಡು, ಹವ್ಯಾಸಿ ಲೇಖಕ

ಈ ನೆಲದ ನಿಜ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಅಜ್ಞಾನವೆಂಬ ಅಂಧಕಾರದ ಕತ್ತಲೆಯನ್ನು ಕಳೆದು ಜ್ಞಾನವೆಂಬ ಮಹತ್ತರ ಜ್ಯೋತಿಯನ್ನು ಹೊತ್ತಿಸುವ ಗುರು ಪ್ರತಿಯೊಬ್ಬರ ಬದುಕಿನ ದಾರಿದೀಪ . “ಗು” ಎಂದರೆ ಅಜ್ಞಾನ ಮತ್ತು “ರು” ಎಂದರೆ ಅದನ್ನ ದೂರಮಾಡುವವನು. ಹಾಗಾಗಿ ಗುರು ಎಂದರೆ ಅಜ್ಞಾನದ ತಪಸ್ಸನ್ನು ದೂರಮಾಡಿ ಜ್ಞಾನದ ಬೆಳಕನ್ನು ಹರಡುವ ಮಹಾನ್ ವ್ಯಕ್ತಿ. ಇಂತಹ ಗುರುಗಳಿಗೆ ಶ್ರದ್ಧಾ, ಭಕ್ತಿ, ಗೌರವ ತೋರಿಸುವ ಒಂದು ವಿಶಿಷ್ಟ ದಿನವೇ ಗುರುಪೂರ್ಣಿಮೆ.

ಭಾರತದ ಸಂಸ್ಕೃತಿಯಲ್ಲಿ ಗುರು ಮತ್ತು ಶಿಷ್ಯರ ಸಂಬಂಧ ಬಹುಪವಿತ್ರ. ಗುರು ಶಿಷ್ಯನಿಗೆ ಕೇವಲ ಪಾಠಗಳನ್ನು ಬೋಧಿಸುವವನು ಮಾತ್ರವಲ್ಲ, ಆತನು ಶಿಷ್ಯನ ವ್ಯಕ್ತಿತ್ವವನ್ನು ರೂಪಿಸುವ ಧರ್ಮಾತ್ಮ. ಗುರುಶಿಷ್ಯ ಸಂಬಂಧದ ಮಹತ್ವವನ್ನು ರಾಮಾಯಣ, ಮಹಾಭಾರತ, ಉಪನಿಷತ್ತುಗಳು, ಭಗವದ್ಗೀತೆ ಮುಂತಾದ ಪವಿತ್ರ ಗ್ರಂಥಗಳಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.

ಭಗವದ್ಗೀತೆಯಲ್ಲಿ ಅರ್ಜುನನ ಗೊಂದಲವನ್ನು ನಿವಾರಿಸಿ, ಧರ್ಮಯುದ್ಧಕ್ಕೆ ಅವನನ್ನು ಸಿದ್ಧಪಡಿಸಿದ ಶ್ರೀಕೃಷ್ಣನು ಪರಮ ಗುರು. ಶಿಷ್ಯನಿಗಾಗಿ ಬದುಕು ರೂಪಿಸುವ, ಶ್ರದ್ಧೆ ಮತ್ತು ಶಿಸ್ತಿಗಾಗಿ ಜೀವಿಸುವ ವ್ಯಕ್ತಿಯೇ ನಿಜವಾದ ಗುರು. ವೇದ ಉಪನಿಷತ್ತುಗಳಿಂದ ಹಿಡಿದು ಇಂದಿನ ಕಾಲದವರೆಗೆ “ಗುರುವೆ ಬ್ರಹ್ಮಾ, ಗುರುವೆ ವಿಷ್ಣು, ಗುರುವೆ ದೇವೋ ಮಹೇಶ್ವರಃ” ಎಂಬ ಮಂತ್ರವು ಗುರುಮಹಿಮೆ ಹೆಸರಿಸಲ್ಪಟ್ಟಿದೆ. ಇದನ್ನು ಆಚರಿಸುವ ದಿನವೇ ಗುರುಪೂರ್ಣಿಮೆ. ಗುರುಪೂರ್ಣಿಮೆ ಹಬ್ಬವು ಆಷಾಢ ಮಾಸದ ಪೂರ್ಣಿಮೆ ದಿನದಂದು ಬರಲಿದೆ. ಈ ದಿನವೇ ಮಹರ್ಷಿ ವೇದವ್ಯಾಸರು ಜನಿಸಿದರು ಎನ್ನಲಾಗುತ್ತದೆ. ಅವರು ವೇದಗಳನ್ನು ವಿಂಗಡಿಸಿ ಮಾನವನಿಗೆ ಜ್ಞಾನವನ್ನೂ, ಧರ್ಮಪಥವನ್ನೂ ನೀಡಿದರು. ಆದ್ದರಿಂದ ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ವೇದವ್ಯಾಸರು ಮಾತ್ರವಲ್ಲದೆ, ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುವ ಎಲ್ಲ ಗುರುಗಳನ್ನು ಸ್ಮರಿಸುವ ಮತ್ತು ಗೌರವಿಸುವ ದಿನವಿದು.

ಗುರು ಎಂಬವರು ನಮ್ಮನ್ನು ಅಜ್ಞಾನದಿಂದ ಜ್ಞಾನಕ್ಕೆ ಕರೆದೊಯ್ಯುವ ಪ್ರಕಾಶಸ್ವರೂಪ. ಅವರು ಶಿಷ್ಯನನ್ನು ನಾನಾ ಬಗೆಯ ಜೀವನಪಾಠಗಳ ಮೂಲಕ ಮನಸ್ಸು, ನಡೆ, ಚಿಂತನೆ ಮತ್ತು ಭಾವನೆಗಳಲ್ಲಿ ಬದಲಾವಣೆ ತರುತ್ತಾರೆ. ಪೋಷಕರು ಜೀವನ ಕೊಡುವವರು ಆದರೆ, ಗುರುಗಳು ಜೀವಿತದ ದಿಕ್ಕು ತೋರಿಸುವವರು.

ಗುರುಪೂರ್ಣಿಮೆಯು ಕೇವಲ ಹಿಂದೂ ಧರ್ಮದಲ್ಲಿಯೇ ಅಲ್ಲದೆ ಬೌದ್ಧ ಮತ್ತು ಜೈನ ಸಂಪ್ರದಾಯಗಳಲ್ಲಿಯೂ ವಿಶೇಷ ದಿನವಾಗಿದೆ. ಬೌದ್ಧ ಧರ್ಮದಲ್ಲಿ ಈ ದಿನ ಮಹತ್ವಪೂರ್ಣ, ಏಕೆಂದರೆ ಗೌತಮ ಬುದ್ಧನು ತನ್ನ ಮೊದಲ ಬೋಧನೆಯನ್ನು ಸಾರನಾಥದಲ್ಲಿ ನೀಡಿದ್ದು ಈ ದಿನ. ಇದರಿಂದಾಗಿ ಬೌದ್ಧರು ಈ ದಿನವನ್ನು “ಧರ್ಮ ಚಕ್ರ ಪ್ರವೃತ್ತಿ ದಿನ” ಎಂದು ಆಚರಿಸುತ್ತಾರೆ. ಜೈನ ಧರ್ಮದ ಪ್ರಕಾರ, ಭಗವಾನ್ ಮಹಾವೀರ ಅವರು ತಮ್ಮ ಪ್ರಮುಖ ಶಿಷ್ಯರಾದ ಇಂಡ್ರಭೂತಿ ಗೌತಮರಿಗೆ ಗುರುಪದವನ್ನು ನೀಡಿದ್ದು ಈ ದಿನ. ಹೀಗಾಗಿ ಗುರುಪೂರ್ಣಿಮೆ ಎಲ್ಲಾ ಧರ್ಮಗಳಲ್ಲಿ ಗುರುತಿನ, ಜ್ಞಾನಪಥದ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವಾಗಿದೆ.

ಒಬ್ಬ ಉತ್ತಮ ಗುರುವಿನ ಆಶೀರ್ವಾದ ದೊರೆತರೆ, ವಿದ್ಯಾರ್ಥಿಯು ಎಲ್ಲಿ ಬೇಕಾದರೂ ಬೆಳೆಯಬಹುದು. ಈ ನಿಟ್ಟಿನಲ್ಲಿ, ಗುರುಪೂರ್ಣಿಮೆ ನಮಗೆ ಗುರುಗಳ ಮಹತ್ವವನ್ನು ನೆನಪಿಸುವ ಪವಿತ್ರ ದಿನ. ಹಲವೆಡೆ ವ್ಯಾಸಪೂಜೆ, ಸತ್ಸಂಗ, ಪ್ರವಚನ, ಧ್ಯಾನ, ಜಪ, ಪಠಣ ಇತ್ಯಾದಿ ಮೂಲಕ ಈ ದಿನದ ಆಚರಣೆಗೆ ಮಹತ್ವ ನೀಡಲಾಗುತ್ತದೆ. ಒಮ್ಮೆ ಒಬ್ಬ ಗುರುವು ತಮ್ಮ ಶಿಷ್ಯನೊಂದಿಗೆ ನದಿಯನ್ನು ದಾಟುವುದಕ್ಕೆ ದೋಣಿ ಹಿಡಿಯಲು ದಡದ ಕಡೆಗೆ ಹೋಗುತ್ತಿದ್ದರು. ಆಗ ದಾರಿಯಲ್ಲಿ ಬಂದ ಕೆಲವು ಹುಡುಗರು, ಶಿಷ್ಯನನ್ನು ಬೆದರಿಸಲಾರಂಭಿಸಿದರು. ಅವನ ಮೇಲೆ ಕಲ್ಲುಗಳನ್ನು ಸಹ ಎಸೆಯಲು ತೊಡಗಿದರು. ಶಿಷ್ಯನು ಪ್ರತಿಯಾಗಿ ಏನನ್ನೂ ಹೇಳಲಿಲ್ಲ. ಗುರು ಮತ್ತು ಶಿಷ್ಯನು ಒಂದು ದೋಣಿ ಹತ್ತಿದರು. ಅರ್ಧ ದಾರಿ ಪಯಣಿಸಿದ ನಂತರ, ಆ ಇತರ ಹುಡುಗರು ಕುಳಿತಿದ್ದ ಇನ್ನೊಂದು ದೋಣಿಯು ಮುಳುಗತೊಡಗಿತು.

ಆಗ ಗುರುಗಳು ಶಿಷ್ಯನ ಕಪಾಳಮೋಕ್ಷ ಮಾಡಿದರು. ಗುರುವಿನ ಈ ಚರ್ಯೆಯಿಂದ ಶಿಷ್ಯನು, ತಾನು ಒಬ್ಬ ಒಳ್ಳೆಯ ಶಿಷ್ಯನಾಗಿದ್ದರೂ, ಗುರುಗಳು ಹೀಗೆ ತನಗೇ ಹೊಡೆದುಬಿಟ್ಟರಲ್ಲ ಎಂದು ದಿಗ್ಭ್ರಮೆಗೊಂಡನು. ಆಗ ಗುರುಗಳು “ಅವರ ದೋಣಿ ಮುಳುಗಲು ನೀನೇ ಕಾರಣ, ನಿನ್ನ ತಪ್ಪಿನಿಂದಲೇ ಇದು ಸಂಭವಿಸುತ್ತಿರುವುದು. ನೀನು ಅವರ ನಿಂದನೆಗೆ ಪ್ರತಿಕ್ರಿಯಿಸದಿದ್ದರೆ, ಅದು ಅವರ ಕರ್ಮವನ್ನು ತೆಗೆದುಹಾಕುತ್ತಿತ್ತು. ಅವರ ಅವಮಾನಗಳನ್ನು ತಣಿಸಲು ನಿನಗೆ ಸಾಕಷ್ಟು ಸಹಾನುಭೂತಿ ಇಲ್ಲದಿದ್ದ ಕಾರಣ, ಪ್ರಕೃತಿ ಈಗ ಅವರನ್ನು ಇನ್ನೂ ಗಾಢವಾಗಿ ಶಿಕ್ಷಿಸುತ್ತಿದೆ” ಎಂದು ಹೇಳಿದರು.
ಅದು ಶಿಷ್ಯನಲ್ಲಿ ಪರಿವರ್ತನೆಯ ಬೆಳಕು ತರುತ್ತದೆ .

ಗುರುಪೂರ್ಣಿಮೆ ಒಂದು ಆಚರಣೆ ಮಾತ್ರವಲ್ಲ. ಇದು ಶ್ರದ್ಧೆ, ಭಕ್ತಿ ಹಾಗೂ ನಿಷ್ಠೆಯ ಸಂಕೇತವಾಗಿದೆ. ಈ ದಿನವನ್ನು ನಾವು ನಮ್ಮ ಬದುಕನ್ನು ಬದಲಾಗಿಸಿದ ಗುರುಗಳ ಸ್ಮರಣೆಯಲ್ಲಿ ಕಳೆಯಬೇಕು. ನಾವು ಪಡೆದ ಜ್ಞಾನವನ್ನು ಜಾಗೃತಿಯಿಂದ ಅನುಸರಿಸಿ, ಗುರುಗಳ ಮಾರ್ಗದರ್ಶನದಂತೆ ನಡೆದು ಅವರ ಹೆಸರಿಗೆ ಗೌರವ ತರಬೇಕು. ಗುರು ಶಿಷ್ಯನಿಗೆ ಜ್ಞಾನ ನೀಡುವವನು, ಆದರೆ ಶಿಷ್ಯನು ಶ್ರದ್ಧೆ ಮತ್ತು ವಿಧೇಯತೆಯಿಂದ ಕಲಿಯಬೇಕಾಗುತ್ತದೆ. ಭಕ್ತಿ ಇಲ್ಲದ ಶಿಷ್ಯನಿಗೆ ಗುರುವಿನ ಪ್ರಯತ್ನ ಫಲವತ್ತಾಗುವುದಿಲ್ಲ. ಶಿಷ್ಯನು ಧೈರ್ಯ, ನಿಷ್ಠೆ ಮತ್ತು ಮಾರ್ಗಪಾಲನೆಯೊಂದಿಗೆ ಸಾಗಬೇಕು. ತೇಜಸ್ವಿ ಶಿಷ್ಯನು ಮುಂದಿನ ಪೀಳಿಗೆಗೆ ಗುರುವಾಗುವ ಸಾಮರ್ಥ್ಯವನ್ನು ಹೊಂದಿರುತ್ತಾನೆ.

ಇಂದಿನ ಯುಗದಲ್ಲಿ ತಂತ್ರಜ್ಞಾನ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ವಿದ್ಯೆ, ಮಾಹಿತಿ ಎಲ್ಲವೂ ಆನ್‌ಲೈನಲ್ಲಿ ಲಭ್ಯವಿದೆ. ಆದರೆ ನೈಜ ಮಾರ್ಗದರ್ಶನ, ಜೀವನದ ದಿಕ್ಕು ಸೂಚಿಸುವ ಶಕ್ತಿ ಗುರುಗಳಲ್ಲಿದೆ. ಜೀವನದಲ್ಲಿ ಪಾಠಗಳನ್ನು ಕಲಿಯುವುದು ಮಾತ್ರವಲ್ಲದೆ, ಸತ್ಯವೊಂದೇ ಧರ್ಮ ಎಂಬ ನುಡಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಗುರುಗಳ ಅನುಭವ, ಮಾರ್ಗದರ್ಶನ ಅಗತ್ಯ. ಸಾವಿರಾರು ವರ್ಷಗಳಿಂದ, ಗುರು ಪೂರ್ಣಿಮೆಯನ್ನು ಮಾನವ ಜನಾಂಗಕ್ಕೆ ಹೊಸ ಸಾಧ್ಯತೆಗಳು ತೆರೆದುಕೊಂಡ ದಿನವೆಂದು ಗುರುತಿಸಿ ಆಚರಿಸಲಾಗುತ್ತಿತ್ತು . ಆದಿಯೋಗಿಯು ನೀಡಿದ ಜ್ಞಾನ ಎಲ್ಲಾ ಧರ್ಮಗಳಿಗಿಂತಲೂ ಹಿಂದಿನದು. ಜನರು ಮಾನವೀಯತೆಯನ್ನು ಒಡೆಯುವ ವಿಭಜಕ ಮಾರ್ಗಗಳನ್ನು ರೂಪಿಸುವ ಮೊದಲು, ಅದನ್ನು ಸರಿಪಡಿಸಲು ಅಸಾಧ್ಯವೆಂದು ತೋರುವ ಹಂತಕ್ಕೆ, ಮಾನವ ಪ್ರಜ್ಞೆಯನ್ನು ಹೆಚ್ಚಿಸಲು ಅಗತ್ಯವಾದ ಅತ್ಯಂತ ಶಕ್ತಿಶಾಲಿ ಸಾಧನಗಳನ್ನು ಅರಿತುಕೊಂಡರು ಮತ್ತು ಪ್ರಚಾರ ಮಾಡಿದರು. ಸಾವಿರಾರು ವರ್ಷಗಳ ಹಿಂದೆ, ಆದಿಯೋಗಿಯು ಮಾನವ ಕಾರ್ಯವಿಧಾನವನ್ನು ಸಮೀಪಿಸಲು ಮತ್ತು ಅಂತಿಮ ಸಾಧ್ಯತೆಯಾಗಿ ಪರಿವರ್ತಿಸಲು ಸಾಧ್ಯವಿರುವ ಪ್ರತಿಯೊಂದು ಮಾರ್ಗವನ್ನು ಅನ್ವೇಷಿಸಿದರು.

ಆಧುನಿಕ ಗುರುಗಳು ನಮ್ಮ ಶಾಲಾ ಶಿಕ್ಷಕರಾಗಿರಬಹುದು, ಕಾಲೇಜು ಉಪನ್ಯಾಸಕರಾಗಿರಬಹುದು, ಅಥವಾ ಜೀವನಪಾಠ ಕಲಿಸುವ ಪೋಷಕರು, ಹಿರಿಯರು, ಆಧ್ಯಾತ್ಮಿಕ ಗುರುಗಳಾಗಿರಬಹುದು. ಅವರ ಮಾರ್ಗದರ್ಶನವಿಲ್ಲದೆ ಬದುಕಿನ ದಾರಿಯಲ್ಲಿ ದಿಕ್ಕುತೋರುವುದು ಕಷ್ಟ.
ನೇಪಾಳದ ಶಾಲೆಗಳಲ್ಲಿ ಗುರು ಪೂರ್ಣಿಮೆಯನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ರುಚಿಯಾದ ತಿಂಡಿಗಳನ್ನು, ಹಾರಗಳನ್ನು ಮತ್ತು ಅಲ್ಲಿನ ನಾರಿನಿಂದ ಮಾಡಲಾದ ಟೋಪಿ ಎಂಬ ವಿಶೇಷ ಟೊಪಗಿಗಳನ್ನು ಕೊಡುವ ಮೂಲಕ ಗೌರವ ಸಲ್ಲಿಸುತ್ತಾರೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಪ್ರದರ್ಶನಗಳನ್ನು ಆಯೋಜಿಸಿ ಶಿಕ್ಷಕರ ಶ್ರಮಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ದಿನ ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಇನ್ನಷ್ಟು ಸಧೃಡಗೊಳಿಸಿಕೊಳ್ಳುತ್ತಾರೆ.

ಒಂದು ವೇಳೆ ನೀವು ಬಲಶಾಲಿಯಾಗಿದ್ದರೆ, ಹೆಚ್ಚು ಸೇವೆ ಮಾಡಿ. ಸದುಪಯೋಗ ಪಡಿಸಿಕೊಳ್ಳುವುದು ಎಂದರೆ ನಿಮ್ಮ ಉಡುಗೊರೆಗಳನ್ನು ಸಮಾಜದ ಒಳಿತಿಗಾಗಿ ಬಳಸುವುದು, ಇತರರಲ್ಲಿನ ದೈವಿಕ ಗುಣಗಳನ್ನು ಎತ್ತಿ ಹಿಡಿಯಲು ಬಳಸುವುದು. ದೈವತ್ವವು ಇಡೀ ಸೃಷ್ಟಿಯಲ್ಲಿ ವ್ಯಾಪಿಸಿದೆ. ಆದ್ದರಿಂದ ಯಾರಿಗೇ ಸೇವೆ ಸಲ್ಲಿಸಿದರೂ ಅದು ಪರಮಾತ್ಮನ ಆರಾಧನೆಯೇ ಆಗುವುದು. ಈ ಜ್ಞಾನವನ್ನು ಗೌರವಿಸಿ, ನಿಮ್ಮ ಹಾಗೂ ಇತರರ ಜೀವನವು ಇದರಿಂದ ಬೆಳಗುತ್ತದೆ. ಗುರು ಪೂರ್ಣಿಮೆಯು ಸಾಧಕರಿಗೆ ಸಂಭ್ರಮದ ದಿನ. ಅಂದು, ಸಾಧಕನು ಜ್ಞಾನದ ಮಾರ್ಗದಲ್ಲಿ ತಮ್ಮ ಪಯಣವನ್ನು ಅವಲೋಕನ ಮಾಡಿಕೊಳ್ಳಬೇಕು. ಎಷ್ಟು ದೂರ ಸಾಗಿದ್ದಾರೆ, ಜೀವನದಲ್ಲಿ ಆದ ಅನುಭವಗಳು ಮತ್ತು ಅದರಿಂದ ಕಲಿತ ಪಾಠಗಳು, ದಾಟಿದ ಅಡೆತಡೆಗಳು ಮತ್ತು ಅವರ ಮುಂದಿನ ನಡೆ ಈ ಎಲ್ಲದರ ಬಗ್ಗೆ ಪರಿಶೀಲನೆ ನಡೆಯುತ್ತದೆ.

ಗುರುಪೂರ್ಣಿಮೆ ಎಂದರೆ ಕೇವಲ ಹಬ್ಬವಲ್ಲ, ಅದು ನಮ್ಮ ಜೀವನದ ಜ್ಞಾನಯಾನಕ್ಕೆ ದೀಪವನ್ನು ಹಚ್ಚುವ ದಿನ. ನಾವು ನಮ್ಮಲ್ಲಿರುವ ಅಜ್ಞಾನದ ಅಂಧಕಾರವನ್ನು ಗುರುಗಳ ಕರುಣೆಯಿಂದ ದೂರಮಾಡಬೇಕು. ಅದು ಜ್ಞಾನಪಥದ ಬೆಳಕುಗಳ ಹಬ್ಬ. ಗುರುಗಳ ಮಾರ್ಗದರ್ಶನದಿಂದ ಮಾತ್ರವಷ್ಟೇ ಒಂದು ಶ್ರೇಷ್ಠ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲಾಗುತ್ತದೆ. ವೇದವ್ಯಾಸರಿಂದ ಕೃಷ್ಣನ ತನಕ, ವಿಶ್ವೇಶತೀರ್ಥರಿಂದ ಅಪ್ಪುಜಿ ತನಕ, ಗುರುಗಳು ಶಿಷ್ಯರಿಗೆ ಆತ್ಮವಿಶ್ವಾಸ, ಸತ್ಯ, ಧೈರ್ಯ ಮತ್ತು ಮಾರ್ಗದರ್ಶನ ನೀಡಿದವರು. ಅಂತಹ ಗುರುಗಳಿಗೆ ಗೌರವ ಸಲ್ಲಿಸುವ, ತಾವು ಶಿಷ್ಯನಾಗಿ ಗುರುಮಾರ್ಗದಲ್ಲಿ ನಡೆಯುವುದಾಗಿ ಪ್ರತಿಜ್ಞೆ ಮಾಡುವ, ಶ್ರದ್ಧಾ ಭಕ್ತಿಯಿಂದ ಅವರ ಪಾದದೊಳಗೆ ಶರಣಾಗುಣಿಸುವ ಈ ದಿನವು ಜೀವನದಲ್ಲಿ ಬಹುಮಾನ್ಯವಾದ ದಿನವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ದಿನದ ಮಹತ್ವವನ್ನು ಅರ್ಥಮಾಡಿಕೊಂಡು, ತಮ್ಮ ಜೀವನದಲ್ಲಿ ಗುರುಗಳನ್ನು ಗೌರವಿಸುವ ಮನೋಭಾವವನ್ನು ಬೆಳೆಸಬೇಕು. ಗುರುಪೂರ್ಣಿಮೆಯ ಉತ್ಸವವು ಜ್ಞಾನ, ಶ್ರದ್ಧೆ ಮತ್ತು ಸಂಸ್ಕೃತಿಯ ಶ್ರೇಷ್ಠತೆಯ ಪರಿಪೂರ್ಣತೆಯ ಪ್ರತೀಕವಾಗಿದೆ.

Related Posts

Leave a Reply

Your email address will not be published. Required fields are marked *