Menu

ಅಕ್ರಮ ಸೈಟ್​​ ಮಾರಾಟ: ಕೆಹೆಚ್‌ಬಿ ಎಇಇ ಸೇರಿ ಮೂವರ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲು

ಅಕ್ರಮವಾಗಿ ಸೈಟ್​​ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ  ವಂಚಿಸಿ ನಷ್ಟ ಉಂಟುಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ‌ ಮಂಡಳಿ (ಕೆಹೆಚ್‌ಬಿ) ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸೇರಿದಂತೆ ಇಬ್ಬರಿಗೆ ಸಂಬಂಧಿಸಿದ ಕಚೇರಿ, ನಿವಾಸಗಳಿಗೆ  ಲೋಕಾಯುಕ್ತ‌ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೆಹೆಚ್‌ಬಿಯ ಯಲಹಂಕ ಉಪನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಅಸ್ಗರ್, ಗೋವಿಂದಯ್ಯ ಎಂಬವರಿಗೆ ಸೇರಿರುವ  ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಆರೋಪಿತರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕ ನ್ಯೂಟೌನ್‌ನ ಸೈಟ್ ನಂಬರ್ 271ಎ ಸೆಕ್ಟರ್‌ಗೆ ಸಂಬಂಧಿಸಿದಂತೆ ಇಂಜಿನಿಯರ್ ಸೈಯದ್ ಅಸ್ಗರ್ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ.‌ ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 10 ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಿ ಕೆ. ಎಸ್. ಚಂದ್ರಶೇಖರ ಆಜಾದ್ ಎಂಬವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಸೈಯದ್ ಅಸ್ಗರ್, ಗೋವಿಂದಯ್ಯ ಹಾಗೂ ಹರಿಣಿ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಯಲಹಂಕ ನ್ಯೂಟೌನ್‌ನ ಕೆಹೆಚ್‌ಬಿ ಕಚೇರಿ, ಆರ್.ಟಿ. ನಗರದಲ್ಲಿರುವ ಸೈಯದ್ ಅಸ್ಗರ್ ನಿವಾಸ ಹಾಗೂ ಗೋವಿಂದಯ್ಯ ನಿವಾಸದಲ್ಲಿ ಪರಿಶೀಲನೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

Related Posts

Leave a Reply

Your email address will not be published. Required fields are marked *