ರಾಜ್ಯದ ಪ್ರಮುಖ ಆನೆ ಬಿಡಾರಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದ ನಾಲ್ಕು ಗಂಡಾನೆಗಳು ಅನಾರೋಗ್ಯದಿಂದ ಬಳಲುತ್ತಿವೆ.
ಬಿಡಾರದಲ್ಲರುವ ಪ್ರಮುಖ ಆನೆಗಳಾದ ಸಾಗರ್, ಬಾಲಣ್ಣ ಹಾಗೂ ಸೆರೆ ಹಿಡಿದು ತಂದಿರುವ ವಿಕ್ರಾಂತ್ ಹಾಗೂ ಅಡಕಬಡಕ ಆನೆ ಅನಾರೋಗ್ಯದಿಂದ ಬಳಲುತ್ತಿದ್ದು, ಆನೆ ಪ್ರಿಯರಿಗೆ ಆಘಾತ ತಂದಿದೆ.
ಬಾಲಣ್ಣ ಆನೆಯ ಬಲಗಡೆಯ ಕಿವಿಗೆ ಗಂಭೀರವಾದ ಗಾಯವಾಗಿ ಕೀವು ಉಂಟಾಗಿದ್ದು, ಕಿವಿ ತುಂಡಾಗಿ ಬೀಳುವ ಸ್ಥಿತಿಯಲ್ಲಿದೆ. ಬಾಲಣ್ಣ ಆನೆ ಶಿವಮೊಗ್ಗ ದಸರಾದಲ್ಲಿ ಭಾಗಿಯಾಗುವ ಮುನ್ನವೇ ಕಾಲಿಗೆ ನೋವು ಮಾಡಿಕೊಂಡಿದ್ದು, ಇದಕ್ಕಾಗಿ ಆತನ ಕಿವಿಗೆ ಇಂಜೆಕ್ಷನ್ ನೀಡಲಾಗಿತ್ತು. ಈ ಇಂಜೆಕ್ಷನ್ ನಿಂದಾಗಿ ಆನೆಯ ಕಿವಿ ಉದುರುವಂತಾಗಿದೆ.
ದಸರಾದಲ್ಲಿ ಭಾಗಿಯಾಗಿ ಮರಳಿದ ನಂತರ ಮರಳಿದ ಮತ್ತೊಂದು ಆನೆ `ಸಾಗರ’ಕ್ಕೆ ಅಜೀರ್ಣ ಉಂಟಾಗಿದೆ. ಹೊಟ್ಟೆ ಬಳಿ ಇಂಜೆಕ್ಷನ್ ನೀಡಿದ್ದರಿಂದ ಗಾಯವಾಗಿ ಕೀವು ಉಂಟಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿ ಸೆರೆ ಹಿಡಿದು ತಂದಿದ್ದ ವಿಕ್ರಾಂತ್ ಎಂಬ ಆನೆಯನ್ನು ತರಬೇತಿಗಾಗಿ ಕ್ರಾಲ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇದರ ಹಿಂಬದಿಯ ಬಲಗಾಲಿನಲ್ಲಿ ಗಾಯ ಹುಣ್ಣಾಗಿ ಹುಳಗಳಾಗಿವೆ. ಇದೂ ಸಹ ಓಡಾಡಲು ಕಷ್ಟಪಡುವಂತಹ ಸ್ಥಿತಿಯಲ್ಲಿದೆ. ಸದ್ಯ ಕ್ರಾಲ್ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.ಕೊಲ್ಲೂರು ಬಳಿಯ ಸಿದ್ದಾಪುರದಲ್ಲಿ ಸೆರೆಯಾಗಿದ್ದ ಅಡಕಬಡಕ ಆನೆಯನ್ನು ಕ್ರಾಲ್ನಲ್ಲಿಟ್ಟು ತರಬೇತಿ ನೀಡಲಾಗುತ್ತಿದೆ. ತರಬೇತಿ ವೇಳೆ ಇನ್ನೊಂದು ಆನೆ ತಳ್ಳಿದ ಪರಿಣಾಮ ಮುಗ್ಗರಿಸಿ ಬಿದ್ದು, ಎಡಗಾಲಿಗೆ ಗಾಯವಾಗಿದೆ.
ಸಕ್ರೆಬೈಲಿನಲ್ಲಿ ಒಟ್ಟು 25 ಆನೆಗಳಿವೆ. ನಾಲ್ಕು ಆನೆಗಳಿಗೆ ಅನಾರೋಗ್ಯವಾಗಿರುವುದರಿಂದಾಗಿ ಪ್ರಾಣಿ ಪ್ರಿಯರಿಗೆ ನೋವುಂಟಾಗಿದೆ. ಆನೆಗಳಿಗೆ ಹುಲಿ ಮತ್ತು ಸಿಂಹಧಾಮದ ವೈದ್ಯ ಡಾ. ಮುರುಳಿ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಕುರಿತು ಸಿಸಿಎಫ್ ಹನುಮಂತಪ್ಪ ಕೆ.ಟಿ. ಅವರು ಮಾತನಾಡಿ, “ದಸರಾ ಮೆರವಣಿಗೆಗೆ ಭಾಗವಹಿಸುವ ಮುನ್ನವೇ ಬಾಲಣ್ಣ ಆನೆಯ ಕಾಲಿಗೆ ಸ್ವಲ್ಪ ಗಾಯವಾಗಿತ್ತು. ಆಗ ಅದರ ಕಾಲಿಗೆ ನೋವಿನ ಇಂಜೆಕ್ಷನ್ ನೀಡಲಾಗಿತ್ತು. ಇದರಿಂದಾಗಿ ಅದು ಓಡಾಡುವುದಕ್ಕೆ ಸಾಧ್ಯವಾಗಿತ್ತು. ನಂತರ ಅದಕ್ಕೆ ಇಂಜೆಕ್ಷನ್ ನೀಡಲು ಹೋದಾಗ ಮಲಗಿದ್ದ ಆನೆ ಸಡನ್ ಆಗಿ ಮೇಲೆ ಎದ್ದು, ಇಂಜೆಕ್ಷನ್ ನೀಡಿದ ಜಾಗವನ್ನು ಮರಕ್ಕೆ ಉಜ್ಜಿತ್ತು. ಇದರಿಂದ ಅದರ ಕಿವಿಗೆ ಸ್ವಲ್ಪ ಗಾಯವಾಗಿತ್ತು.
ಕಿವಿ ಬಳಿ ರಕ್ತ ಸಂಚಲನ ಉಂಟಾಗುವ ನರದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿರಬಹುದೆಂದು ಪರೀಕ್ಷಿಸಲಾಗಿದೆ. ನಂತರ ಅದಕ್ಕೆ ಆ್ಯಂಟಿ ಬಯೋಟಿಕ್ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಆನೆಯ ಕಿವಿ ಬಳಿ ಸ್ವಲ್ಪ ಕೀವು ಆಗಿದ್ದರಿಂದಾಗಿ ಇದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಕಿವಿ ಕೆಳ ಭಾಗ ಕೀವಾಗಿದೆ. ಇದರಿಂದ ಕಿವಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಕಿವಿ ಮೇಲಿಂದ ಕೂಡಿಕೊಳ್ಳುತ್ತಾ ಬರುತ್ತಿದೆ. ಆದರೆ ಆನೆಗೆ ಯಾವುದೇ ಜೀವಭಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಿವಿಯ ಕೆಳಭಾಗ ಸ್ವಲ್ಪ ನೇತಾಡುವ ಪರಿಸ್ಥಿತಿ ಇದ್ರು ಸಹ ಅದಕ್ಕೆ ಲೇಸರ್ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತಂತೆ ಆನೆ ವೈದ್ಯರನ್ನು ಸಂಪರ್ಕ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಗುಜರಾತ್ನಲ್ಲಿ ವನ್ತಾರ, ಆಗ್ರಾದಲ್ಲಿ ಎಸ್ಒಎಸ್ ಇದೆ. ಇವರ ಬಳಿ ಆನೆ ಕಿವಿಗೆ ಹೊಲಿಗೆ ಹಾಕಿ ಕಿವಿ ಸರಿ ಮಾಡಬಹುದೇ ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಬಾಲಣ್ಣ ಆನೆ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ.
ಮೂಡಿಗೆರೆಯಿಂದ ಸೆರೆಹಿಡಿದು ತಂದಿದ್ದ ವಿಕ್ರಾಂತ್ ಆನೆಯ ಕಾಲಿಗೆ ಗಾಯವಾಗಿದೆ. ಇದನ್ನು ಕ್ರಾಲ್ನಲ್ಲಿಟ್ಟು ಟ್ರೈನಿಂಗ್ ನೀಡಲಾಗುತ್ತಿದೆ. ಇದರ ಹಿಂದಿನ ಬಲಗಾಲಿಗೆ ಕಳೆದ ಮೂರು ತಿಂಗಳಿಂದ ಹುಣ್ಣಾಗಿದೆ. ಮಳೆಗಾಲ ಇದ್ದ ಕಾರಣಕ್ಕೆ ಗಾಯವಾದ ಜಾಗಕ್ಕೆ ಹುಣ್ಣಾಗಿದೆ. ಅಂದಿನಿಂದ ಚಿಕಿತ್ಸೆ ನೀಡುತ್ತಿದ್ದು, ಈಗ ಸ್ವಲ್ಪ ಬಿಸಿಲು ಬರುತ್ತಿರುವ ಕಾರಣದಿಂದ ಚೇತರಿಕೆ ಕಾಣುತ್ತಿದೆ. ಈಗ ಗುಣಮುಖನಾಗಿದ್ದಾನೆ ಎಂದು ತಿಳಿಸಿದ್ದಾರೆ.
ಅಡಕಬಡಕ ಎಂಬ ಆನೆಯನ್ನು ಕೊಲ್ಲೂರಿನ ಬಳಿಯ ಸಿದ್ದಾಪುರದ ಬಳಿ ಸೆರೆ ಹಿಡಿದು ತರಲಾಗಿತ್ತು. ಇದನ್ನು ಸಹ ಕ್ರಾಲ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತರಬೇತಿ ನೀಡುವಾಗ ಕ್ರಾಲ್ನಲ್ಲಿದ್ದ ಅಡಕಬಡಕ ಆನೆಗೆ ಇನ್ನೊಂದು ಆನೆ ಚಾರ್ಜ್ ಮಾಡಿದಾಗ ಅದು ಮುಗ್ಗರಿಸಿ ಬಿದ್ದಿದೆ. ಇದರಿಂದ ಅದರ ಎಡಗಾಲಿಗೆ ನೋವಾಗಿತ್ತು. ಅದಕ್ಕೆ ಚಿಕಿತ್ಸೆ ನಡೆಸಲಾಗುತ್ತಿದೆ. ಇದು ಸಹ ಈಗ ಚಿಕಿತ್ಸೆಯಿಂದ ಚೇತರಿಕೆ ಕಾಣುತ್ತಿದೆ” ಎಂದಿದ್ದಾರೆ.
ಸೆರೆ ಹಿಡಿದು ತಂದ ಆನೆಗಳನ್ನು ಕ್ರಾಲ್ನಲ್ಲಿಟ್ಟು ತರಬೇತಿ ನೀಡುವಾಗ ಮರದ ದಿಮ್ಮಿಗೆ ಹೊಡೆದುಕೊಂಡು ಗಾಯ ಮಾಡಿಕೊಳ್ಳುವುದು ಸಾಮಾನ್ಯ. ಸಕ್ರೆಬೈಲಿನ ಸಾಗರ ಆನೆ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿ ಬಂದ ನಂತರ ಅದರ ಜೀರ್ಣಕ್ರಿಯೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿತ್ತು. ಇದರಿಂದ ಅದರ ಕಾಲಿಗೆ ಇಂಜೆಕ್ಷನ್ ನೀಡಿದಾಗ ಅದರ ಕಾಲಿನಲ್ಲಿ ಕೀವು ಕಾಣಿಸಿಕೊಂಡಿತ್ತು. ಇದಕ್ಕೂ ಚಿಕಿತ್ಸೆ ನೀಡಲಾಗುತ್ತಿದೆ. ಇದು ಗುಣಮುಖವಾಗುತ್ತದೆ. ಆನೆಗಳ ಬಗ್ಗೆ ಯಾರೂ ಸಹ ಆತಕಂಕ್ಕೆ ಒಳಗಾಗುವುದು ಬೇಡ ಎಂದು ಅವರು ಮಾಹಿತಿ ನೀಡಿದ್ದಾರೆ.