ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಜ.27ಕ್ಕೆ ಮುಂದೂಡಿದೆ.
ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರ ಬರುವುದಿಲ್ಲ, ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಲೋಕಾಯುಕ್ತ ಪೊಲೀಸರಲ್ಲಿ ತನಿಖಾ ವರದಿ ಎಲ್ಲಿ ಎಂದು ಕೇಳಿದರು. ಲೋಕಾ ಪರ ವಕೀಲರು ತನಿಖಾ ವರದಿ ಪೂರ್ಣಗೊಂಡಿಲ್ಲ ಎಂದು ಉತ್ತರಿಸಿದರು.
ಜ.26ರ ಸಂಜೆಯ ಒಳಗಡೆ ಎಷ್ಟು ತನಿಖೆ ನಡೆದಿದೆಯೋ ಅಷ್ಟು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂದು ಸೂಚಿಸಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಜ.27ಕ್ಕೆ ಮುಂದೂಡಿದರು. ಲೋಕಾಯುಕ್ತ ತನಿಖೆಗೆ ತಡೆ ನೀಡುವುದಿಲ್ಲ, ತನಿಖೆ ಮುಂದುವರಿಯಲಿ ಎಂದು ಸೂಚಿಸಿದರು.
ವಿಚಾರಣೆಗೆ ಸ್ನೇಹಮಯಿ ಕೃಷ್ಣ ಪರ ಮಣಿಂದರ್ ಸಿಂಗ್, ಸಿದ್ದರಾಮಯ್ಯ ಪರ ರವಿಕುಮಾರ ವರ್ಮಾ ಕುಮಾರ್, ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಹಾಜರಾಗಿದ್ದರು.
ರಾಜಕಾರಣಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪೊಲೀಸರು ತನಿಖೆಯನ್ನು ಪಾರದರ್ಶಕವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. 14 ಸೈಟ್‌ಗಳನ್ನು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಲಾಗಿದೆ. ಪ್ರಕರಣದತನಿಖೆ ಆರಂಭವಾಗುತ್ತಿದ್ದಂತೆ ಸೈಟ್‌ಗಳನ್ನು ಮರಳಿಸಿದ್ದಾರೆ. ಡಿವೈಎಸ್‌ಪಿ ಫೈಲ್‌ಗಳನ್ನು ಎತ್ತಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಮುಡಾ ದಾಖಲೆ ಎತ್ತಿಕೊಂಡು ಹೋಗಿರುವ ಬಗ್ಗೆಯೂ ತನಿಖೆ ಮಾಡಿಲ್ಲ ಎಂದು ವಾದಿಸಿದರು.