ಭೋಪಾಲ್: ಹುಲಿ ಅಭಯಾರಣ್ಯದ ಹಿನೌಟಾ ಶ್ರೇಣಿಯ ಶಿಬಿರದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ ಏಷ್ಯಾದ ಅತ್ಯಂತ ಹಿರಿಯ ಶತಾಯುಷಿ ಆನೆ ವತ್ಸಲಾ ಸಾವನ್ನಪ್ಪಿದೆ.
ಮೃತ ವತ್ಸಲಾ 100 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದು, ದೀರ್ಘಕಾಲದವರೆಗೆ ಪನ್ನಾ ಕಾಡಿನಲ್ಲಿಯೇ ವಾಸವಿತ್ತು. ಇತ್ತೀಚಿನ ದಿನಗಳಲ್ಲಿ, ವತ್ಸಲಾಳ ಮುಂಭಾಗದ ಕಾಲ್ಬೆರಳ ಉಗುರುಗಳು ಗಾಯಗೊಂಡು ದಿನೇ ದಿನೇ ನಿತ್ರಾಣಗೊಳ್ಳುತ್ತಿತ್ತು.
ವತ್ಸಲಾ ಹಿನೌಟಾ ಪ್ರದೇಶದ ಖೈರೈಯಾನ್ ನಾಲಾ ಬಳಿ ಮಲಗಿದ್ದು, ಎಷ್ಟೇ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಲಿಲ್ಲ. ಕೊನೆಗೆ ಅಲ್ಲಿಯೇ ಮಂಗಳವಾರ ಮಧ್ಯಾಹ್ನ 1.30 ರವೇಳೆ ಕೊನೆಯುಸೆರೆಳೆದಿದೆ.
ಕಳೆದ 1971ರಲ್ಲಿ ಕೇರಳದ ನೀಲಂಬೂರು ಕಾಡಿನಿಂದ ವತ್ಸಲಾಳನ್ನು ಮಧ್ಯಪ್ರದೇಶಕ್ಕೆ ಕರೆತರಲಾಗಿತ್ತು. ಮೊದಲು ಅವಳನ್ನು ನರ್ಮದಾಪುರಂನಲ್ಲಿ ಇರಿಸಲಾಯಿತು ನಂತರ ಪನ್ನಾ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು.
ಖೈರೈಯಾನ್ ನಾಲಾದಲ್ಲಿ ವಯಸ್ಸಾದಂತೆ ಪ್ರತಿದಿನ ಅವಳಿಗೆ ಸ್ನಾನ ಮಾಡಿಸಿ ಗಂಜಿ ಮುಂತಾದ ಮೃದುವಾದ ಆಹಾರವನ್ನು ನೀಡಲಾಗುತ್ತಿತ್ತು. ವಯಸ್ಸಾಗಿದ್ದ ಕಾರಣ ತುಂಬಾ ದೂರ ನಡೆಯಲು ವತ್ಸಲಾಗೆ ಸಾಧ್ಯವಾಗುತ್ತಿರಲಿಲ್ಲ.
ವರ್ಷಗಳ ಕಾಲ, ವತ್ಸಲಾ ಪ್ರವಾಸಿಗರ ಆಕರ್ಷಣೆಯಾಗಿತ್ತು ಮತ್ತು ಅತ್ಯಂತ ಹಿರಿಯಳಾಗಿದ್ದರಿಂದ, ಅವಳು ಅಭಯಾರಣ್ಯದಲ್ಲಿರುವ ಸಂಪೂರ್ಣ ಆನೆಗಳ ಗುಂಪನ್ನು ಮುನ್ನಡೆಸುತ್ತಿದ್ದಳು.
ಆನೆಗೆ ಹೆಚ್ಚು ವಯಸ್ಸಾಗಿದ್ದರಿಂದ ದೃಷ್ಟಿ ಕಳೆದುಕೊಂಡಿತ್ತು. ಪನ್ನಾ ಜಿಲ್ಲೆಯ ಹುಲಿ ಅಭಯಾರಣ್ಯದಲ್ಲಿ ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ವತ್ಸಲಾಳ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದರು. ಸರಿಯಾದ ಆರೈಕೆಯಿಂದಾಗಿ, ಅಭಯಾರಣ್ಯದ ವಿರಳ ಮತ್ತು ಒಣ ಅರಣ್ಯ ಪ್ರದೇಶದಲ್ಲಿ ವತ್ಸಲಾ ದೀರ್ಘಕಾಲ ಬದುಕಿತ್ತು.
ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾಗಿದ್ದ ವತ್ಸಲಾ ಅಂತ್ಯಕ್ರಿಯೆಯನ್ನು ಬುಧವಾರ ಪನ್ನಾ ಹುಲಿ ಅಭಯಾರಣ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿ ನೆರವೇರಿಸಿ ಕಂಬನಿ ಮಿಡಿದಿದ್ದಾರೆ.