ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮಿಂಚಿದ ಭಾರತ ತಂಡದ ನೂತನ ನಾಯಕ ಶುಭಮನ್ ಗಿಲ್ ಟಾಪ್ 10 ನಲ್ಲಿ ಇದೇ ಮೊದಲ ಬಾರಿ ಪ್ರವೇಶಿಸಿದ್ದಾರೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿ ಅಮೋಘ ಸಾಧನೆ ಮಾಡಿದ ಗಿಲ್ ಬುಧವಾರ ಬಿಡುಗಡೆ ಆದ ಐಸಿಸಿ ಟೆಸ್ಟ್ ನೂತನ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.
ಗಿಲ್ ಒಂದೇ ಬಾರಿ 15 ಸ್ಥಾನ ಜಿಗಿದು ವೃತ್ತಿಜೀವನದಲ್ಲಿ ಮೊದಲ ಬಾರಿ 6ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಒಂದೇ ಪಂದ್ಯದಿಂದ 106 ಅಂಕ ಗಿಟ್ಟಿಸಿ ಒಟ್ಟಾರೆ 807 ಅಂಕದೊಂದಿಗೆ ಭರ್ಜರಿ ಬಡ್ತಿ ಪಡೆದಿದ್ದಾರೆ. ಈ ಮೂಲಕ ಭಾರತದ ಮೂವರು ಬ್ಯಾಟ್ಸ್ ಮನ್ ಗಳು ಅಗ್ರ 10ರಲ್ಲಿ ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.
ಯಶಸ್ವಿ ಜೈಸ್ವಾಲ್ 4ನೇ ಸ್ಥಾನದಲ್ಲಿದ್ದರೆ, ವಿಕೆಟ್ ಕೀಪರ್ ರಿಷಭ್ ಪಂತ್ 8ನೇ ಸ್ಥಾನದಲ್ಲಿ ಇದ್ದಾರೆ.
ಇದೇ ವೇಳೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರನ್ನು ಹಿಂದಿಕ್ಕಿ ಹ್ಯಾರಿ ಬ್ರೂಕ್ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಇಂಗ್ಲೆಂಡ್ ನ ಮತ್ತೊಬ್ಬ ಬ್ಯಾಟ್ಸ್ ಮನ್ ಜಿಮ್ಮಿ ಸ್ಮಿತ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿ 16 ಸ್ಥಾನ ಬಡ್ತಿ ಪಡೆದು 10ನೇ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್ ಪ್ರೀತ್ ಬುಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಪಡೆದ ಮೊಹಮದ್ ಸಿರಾಜ್ 6 ಸ್ಥಾನ ಜಿಗಿದು 22ನೇ ಸ್ಥಾನ ಪಡೆದಿದ್ದಾರೆ.