Wednesday, December 10, 2025
Menu

ಗೋ ಹತ್ಯೆ ಮಾಡಿದವರ ವಿರುದ್ಧ ಪ್ರಕರಣ ಹಿಂಪಡೆದು ಮುಸ್ಲಿಂ ಓಲೈಕೆ: ಆರ್‌.ಅಶೋಕ

R Ashoka

ಬೆಂಗಳೂರು: ಚಿತ್ತಾಪುರದಲ್ಲಿ ಗೋ ಹತ್ಯೆ ಮಾಡಿದವರ ವಿರುದ್ಧ ಪ್ರಕರಣ ಹಿಂಪಡೆದು ಮುಸ್ಲಿಂ ಓಲೈಕೆ ಮಾಡಲಾಗಿದೆ. ಈ ಸರ್ಕಾರ ಮುಸ್ಲಿಮ್‌ ದುಷ್ಕರ್ಮಿಗಳನ್ನು ಬೆಂಬಲಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನಲ್ಲಿ ಗೋ ಕಳ್ಳ ಸಾಗಾಣಿಕೆ ಹಾಗೂ ಗೋ ಹತ್ಯೆ ಮಾಡಿದ ಸುಮಾರು 30 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರ ಬೆಂಬಲಿಗರು ಪೊಲೀಸ್‌ ಠಾಣೆಗೆ ನುಗ್ಗಿ ಕಲ್ಲು ತೂರಾಟ ಮಾಡಿ, ಹಲ್ಲೆ ಮಾಡಿದ್ದಾರೆ. ಅಲ್ಲಿನ ಸಚಿವ ಪ್ರಿಯಾಂಕ್‌ ಖರ್ಗೆ ಸರ್ಕಾರಕ್ಕೆ ಪತ್ರ ಬರೆದು, ಕಳ್ಳರನ್ನು ಬಿಡುಗಡೆ ಮಾಡಬೇಕು, ಕ್ರಿಮಿನಲ್‌ ಪ್ರಕರಣ ರದ್ದು ಮಾಡಬೇಕೆಂದು ಕೋರಿದ್ದರು. ಅದರಂತೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ಗಲಭೆ ವಿಚಾರದಲ್ಲೂ ಹೀಗೆಯೇ ಆಗಿ ಕೋರ್ಟ್‌ ಛೀಮಾರಿ ಹಾಕಿತ್ತು. ಈ ಪ್ರಕರಣದಲ್ಲೂ ಇದೇ ರೀತಿಯಾಗಿದೆ ಎಂದರು.

ಮಾತೆತ್ತಿದರೆ ಕಾಂಗ್ರೆಸ್‌ ಮಹಾತ್ಮ ಗಾಂಧೀಜಿ ಬಗ್ಗೆ ಮಾತಾಡುತ್ತದೆ. ಗೋಹತ್ಯೆ ಮಾಡುವುದಾದರೆ ಗಾಂಧೀಜಿಗೆ ಯಾವ ರೀತಿಯ ಬೆಲೆ ನೀಡಿದ್ದಾರೆ. ಇದು ಮುಸ್ಲಿಮ್‌ ಓಲೈಕೆಯ ಸಂಸ್ಕೃತಿ. ಹೀಗೆ ಬಿಡುಗಡೆ ಮಾಡಿದರೆ ಅವರು ಮತ್ತೆ ಇದೇ ದಂಧೆಗೆ ಇಳಿಯುತ್ತಾರೆ. ಇದರ ವಿರುದ್ಧ ನಾವು ಕೋರ್ಟ್‌ಗೆ ಹೋಗಲಿದ್ದೇವೆ. ಇದಕ್ಕೂ ನಮಗೆ ಜಯ ಸಿಗಲಿದೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಾಲದಲ್ಲಿ ಆಗಿದ್ದ ಆದೇಶವನ್ನು ಸರಿಯಾಗಿ ಓದಬೇಕು. ಅದರಲ್ಲಿ ಮುಖ್ಯಮಂತ್ರಿಯ ಸಹಿಯೂ ಇಲ್ಲ. ಅದು ಚಾಮರಾಜಪೇಟೆಯ ಒಂದೇ ಒಂದು ಶಾಲೆಗೆ ಸಂಬಂಧಿಸಿದಂತೆ ಹೊರಡಿಸಿದ ಸಣ್ಣ ಆದೇಶ. ಇದು ಶಿಕ್ಷಣ ಇಲಾಖೆಯ ಮಟ್ಟದಲ್ಲೇ ಆಗಿದೆ. ಇದರಲ್ಲಿ ಮುಖ್ಯಮಂತ್ರಿಯ ಪಾತ್ರ ಇರಲಿಲ್ಲ. 14 ಸೈಟು ಲೂಟಿಯಾದಾಗ, ವಾಲ್ಮೀಕಿ ನಿಗಮದ ಹಗರಣ ನಡೆದಾಗ, ಎಲ್ಲಕ್ಕೂ ಅಧಿಕಾರಿಗಳೇ ಸಹಿ ಹಾಕಿದ್ದಾರೆ. ಹಾಗಾದರೆ ಇವೆಲ್ಲ ಹಗರಣ ಮುಖ್ಯಮಂತ್ರಿಯಿಂದಲೇ ನಡೆದಿದೆಯೇ? ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ಗೆ ಯಾವುದೇ ಆತಂಕವಿಲ್ಲ. ಇದು ಇಡೀ ದೇಶದಲ್ಲಿರುವ ಸಂಘಟನೆ. ಈ ಬಗ್ಗೆ ಆರ್‌ಎಸ್‌ಎಸ್‌ ನಾಯಕರು ತಲೆ ಕೆಡಿಸಿಕೊಂಡಿಲ್ಲ. ಔಟ್‌ಗೋಯಿಂಗ್‌ ಸಿಎಂ ಸಿದ್ದರಾಮಯ್ಯನವರನ್ನು ಆರ್‌ಎಸ್‌ಎಸ್‌ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅತಿ ಕಡಿಮೆ ಮತ ಅಂತರದಲ್ಲಿ ಗೆದ್ದಿದ್ದಾರೆ. ತೇಜಸ್ವಿ ಸೂರ್ಯ ಒಂದು ಬಾರಿಯೂ ಸೋತಿಲ್ಲ. ಸಿದ್ದರಾಮಯ್ಯನವರಿಗೆ ಮತ ಕಡಿಮೆಯಾದರೆ ತೇಜಸ್ವಿ ಸೂರ್ಯ ಬಳಿ ಕೇಳಬಹುದು. ಅವರನ್ನು ಅಮಾವಾಸ್ಯೆ ಹುಣ್ಣಿಮೆ ಎನ್ನಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ರೈಲ್ವೆಗೆ, ರಸ್ತೆಗೆ, ಕುಡಿಯುವ ನೀರಿಗೆ ಎಷ್ಟು ನೀಡಿದ್ದಾರೆ ಹಾಗೂ ಹಿಂದಿನ ಮನಮೋಹನ್‌ ಸಿಂಗ್‌ ಎಷ್ಟು ನೀಡಿದ್ದಾರೆ ಎಂದು ಕಾಂಗ್ರೆಸ್‌ ಸರ್ಕಾರ ತಿಳಿಸಲಿ. ಎನ್‌ಡಿಎ ಸರ್ಕಾರ ಐದು ಪಟ್ಟು ಹೆಚ್ಚು ಅನುದಾನ ನೀಡಿದೆ. ರಾಜ್ಯ ಕಾಂಗ್ರೆಸ್‌ನಿಂದ ಒಂದು ಬಸ್‌ ನಿಲ್ದಾಣ, ಆಸ್ಪತ್ರೆ, ರಸ್ತೆ ನಿರ್ಮಾಣವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಬೇರೆ ದೇಶಗಳಿಗೆ ನೆರವಾಗಿದೆ. ಜಿಡಿಪಿ ವೇಗವಾಗಿ ಬೆಳೆಯುತ್ತಿದೆ ಎಂದರು.

Related Posts

Leave a Reply

Your email address will not be published. Required fields are marked *