ಮೊದಲು ದುಡ್ಡು ಕೊಡಿಸಲಿ, ಕೇವಲ ಖಾಲಿ ಮಾತನಾಡುವುದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಛೇಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಟನಲ್ ರಸ್ತೆ ವಿಚಾರವಾಗಿ ನಿತಿನ್ ಗಡ್ಕರಿ ಅವರನ್ನು ಕುಮಾರಸ್ವಾಮಿ ಅವರು ಭೇಟಿಯಾಗಿ ಚರ್ಚೆ ನಡೆಸಿರೋದು ಕ್ರೆಡಿಟ್ ವಾರ್ ಆಗುತ್ತಿದೆಯೇ ಎಂದು ಮಾಧ್ಯಮದವರು ಕೇಳಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.“ಕುಮಾರಸ್ವಾಮಿ ಅವರ ಸಲಹೆ ಮತ್ತು ನಿಮ್ಮ ಸಲಹೆಯನ್ನೂ ನಾನು ಸ್ವೀಕಾರ ಮಾಡುತ್ತೇನೆ ಎಂದರು.
ಸಂಪುಟ ಬದಲಾವಣೆಗಾಗಿ ಮುಖ್ಯಮಂತ್ರಿ ದೆಹಲಿ ಭೇಟಿ ನೀಡಿದ್ದಾರೆಯೇ ಎಂದು ಕೇಳಿದಾಗ, ಸದ್ಯಕ್ಕೆ ಸಂಚಿವ ಸಂಪುಟ ಬದಲಾವಣೆ ಕುರಿತು ಯಾವುದೇ ಚರ್ಚೆಯಿಲ್ಲ. ನಾವು ಬಂದಿರುವುದು ಅಭಿವೃದ್ದಿ ವಿಚಾರಗಳನ್ನು ಚರ್ಚೆ ನಡೆಸಲು. ಬೆಂಗಳೂರಿನಲ್ಲಿ ಒಂದಷ್ಟು ರಸ್ತೆಗಳನ್ನು ಅಗಲೀಕರಣ ಮಾಡಬೇಕಿದೆ. ಇದಕ್ಕೆ ರಕ್ಷಣಾ ಇಲಾಖೆ ಭೂಮಿಗಳ ಅವಶ್ಯಕತೆಯಿದೆ. ಈ ಕಾರಣಕ್ಕೆ ಹಾಗೂ ದಸರಾ ವೇಳೆ ಚುಟುಕು ಏರ್ ಶೋ ನಡೆಸಲು ರಕ್ಷಣಾ ಸಚಿವರನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದೇವೆ ಎಂದು ಹೇಳಿದರು.
ನಾಲ್ಕು ಎಂಎಲ್ ಸಿ ಸ್ಥಾನಗಳ ನಾಮನಿರ್ದೇಶನ ಯಾವಾಗ ಎಂದು ಕೇಳಿದಾಗ, “ವಿಧಾನಸಭಾ ಅಧಿವೇಶನದ ಮುಂಚಿತವಾಗಿ ಮುಗಿಯುತ್ತದೆ ಎಂದು ಹೇಳಿದರು. ಮಾಧ್ಯಮದವರಿಗೂ ಒಂದು ಸ್ಥಾನ ನೀಡಲಾಗುವುದು. ಬೀದರ್ ನ ಸಣ್ಣ ನೀರಾವರಿ ಇಲಾಖೆಯ ಎಫ್ ಡಿಎ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹರಿಬಿಟ್ಟಿರುವ ಬಗ್ಗೆ ಕೇಳಿದಾಗ, ಈ ವಿಚಾರ ನನಗೆ ತಿಳಿದಿಲ್ಲ. ಮಾಹಿತಿ ತಿಳಿದು ಮಾತನಾಡುತ್ತೇನೆ” ಎಂದರು.
ನೀವು ಸೋನಿಯಾ ಗಾಂಧಿ ಹಾಗೂ ಇತರೆ ಹಿರಿಯ ನಾಯಕರನ್ನು ಭೇಟಿಯಾಗಿದ್ದೀರಾ ಎಂದು ಕೇಳಿದಾಗ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿಲ್ಲ. ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡದಿದ್ದರೆ ಯಾರನ್ನೂ ಭೇಟಿಯಾಗಲು ಆಗುವುದಿಲ್ಲ. ರಾಹುಲ್ ಗಾಂಧಿ ಅವರು ಪಾಟ್ನಾಗೆ ತೆರಳಿದ್ದಾರೆ ಎಂದು ತಿಳಿಸಿದರು. ಪಾಟ್ನಾದಲ್ಲಿ ರಾಲ್ ಗಾಂಧಿ ಅವರ ಪ್ರತಿಭಟನೆಯನ್ನು ತಡೆದಿರುವ ಬಗ್ಗೆ ಕೇಳಿದಾಗ, ವಿರೋಧ ಪಕ್ಷಗಳ ದನಿಯನ್ನು ಅಡಗಿಸುವುದೇ ಈ ಸರ್ಕಾರದ ಕೆಲಸ. ರಾಹುಲ್ ಗಾಂಧಿ ಅವರು ಮತದಾರರ ಹಕ್ಕುಗಳನ್ನು ರಕ್ಷಿಸಲು ಹೋಗಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಭಾಷಾ ಸಂಘರ್ಷದ ಬಗ್ಗೆ ಕೇಳಿದಾಗ,“ಇದು ಆಯಾ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಕನ್ನಡ ಮತ್ತು ಇಂಗ್ಲಿಷ್ ಗೆ ಪ್ರಾಮುಖ್ಯತೆ ನೀಡುತ್ತೇವೆ” ಎಂದು ಹೇಳಿದರು. ಕನ್ನಡ ಪರೀಕ್ಷೆ ಅಂಕಗಳನ್ನು 125 ರಿಂದ 100 ಕ್ಕೆ ಇಳಿಸಿರುವ ಬಗ್ಗೆ ಬಿಜೆಪಿ ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ನನ್ನ ಇಲಾಖೆಯ ಬಗ್ಗೆ ನನಗೆ ಪ್ರಶ್ನೆ ಕೇಳಿದರೆ ಉತ್ತರ ಹೇಳಬಹುದು” ಎಂದರು.
ಟನಲ್ ರಸ್ತೆ ವಿಚಾರವಾಗಿ ಕೇಳಿದಾಗ, “ಇದಕ್ಕೆ ಎರಡು- ಮೂರು ದಿನದಲ್ಲಿ ಗ್ಲೋಬಲ್ ಟೆಂಡರ್ ಕರೆಯಲಾಗುವುದು. ಟೋಲ್ ಇಲ್ಲದೇ ರಸ್ತೆ ಮಾಡಲು ಸಾಧ್ಯವಿಲ್ಲ. ಏರ್ ಪೋರ್ಟ್, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲಿ ಟೋಲ್ ಇದೆಯಲ್ಲಾ” ಎಂದರು. ಸುರ್ಜೇವಾಲ ಅವರ ಕರ್ನಾಟಕ ಭೇಟಿಯ ಬಗ್ಗೆ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಪಕ್ಷ ಸಂಘಟನಾ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಜಿಲ್ಲಾ ಅಧ್ಯಕ್ಷರನ್ನು ಕರೆಸಿ ಸಭೆ ನಡೆಸಲಾಗಿದೆ. ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಾಧ್ಯಮಗಳು ಹೇಳಿದಂತೆ ಯಾವುದೇ ರಾಜಕೀಯ ವಿಚಾರ ಇಲ್ಲಿಲ್ಲ. ಕೇವಲ ಸಂಘಟನೆ ವಿಚಾರ” ಎಂದು ಹೇಳಿದರು.