ಉತ್ತರ ಪ್ರದೇಶದ ಲಕ್ನೋದಲ್ಲಿ ಕೌಟುಂಬಿಕ ಸಮಸ್ಯೆಯಿಂದ ಬಳಲಿ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಮಾಂತ್ರಿಕನ ಮೊರೆ ಹೋಗಿ ಶವಾವಾಗಿ ವಾಪಸಾಗಿದ್ದಾರೆ. ಮದುವೆಯಾಗಿ 10 ವರ್ಷ ಕಳೆದರೂ ಮಗುವಾಗಿಲ್ಲ ಎಂದು ನೊಂದು ಖಿನ್ನತೆಗೆ ಒಳಗಾಗಿದ್ದ ಅಜಮ್‌ಗಢ ಮೂಲದ ಮಹಿಳೆ ಅನುರಾಧಾಳನ್ನು ಕುಟುಂಬದವರು ಪರಿಹಾರಕ್ಕಾಗಿ ಮಾಂತ್ರಿಕನ ಬಳಿ ಕರೆದುಕೊಂಡು ಹೋಗಿದ್ದರು.
ಮಾಂತ್ರಿಕ ಯಾವುದೋ ಪೂಜೆ ಮಾಡುತ್ತೇವೆ 1 ಲಕ್ಷ ರೂ. ಕೊಡಿ ಆಮೇಲೆ ನಿಮಗೆ ಮಕ್ಕಳಾಗುತ್ತದೆ ಎಂದು ನಂಬಿಸಿದ್ದ. ಆತ ಹೇಳಿದಂತೆ ಕುಟುಂಬದವರು ನಡೆದುಕೊಂಡಿದ್ದರು. 2,200 ರೂ. ಮುಂಗಡ ಕೊಟ್ಟು ಬಂದಿದ್ದರು. ಜುಲೈ 6 ರಂದು ಅನುರಾಧಾ ಅತ್ತೆಯ ಮನೆಯಿಂದ ಮಾಂತ್ರಿಕ ನಡೆಸುವ ಪೂಜೆಗಾಗಿ ತವರು ಮನೆ ಬಂದಿದ್ದರು. ಮಾಂತ್ರಿಕನ ಹೆಂಡತಿ ಹಾಗೂ ಸಹಾಯಕರು ಆಕೆಯ ಕೂದಲನ್ನು ಎಳೆದು ಉಸಿರುಗಟ್ಟಿಸಿದ್ದರು. ಚರಂಡಿ ಹಾಗೂ ಶೌಚಾಲಯದ ನೀರನ್ನು ಕುಡಿಸಿದ್ದರು. ಇದರಿಂದ ಆಕೆಯ ಕುಟುಂಬ ಆಘಾತಕ್ಕೊಳಗಾಗಿ ಆಕೆಯ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಈ ಪ್ರಕ್ರಿಯೆಗಳನ್ನು ನಿಲ್ಲಿಸುಂತೆ ಮನವಿ ಮಾಡಿದರು. ಆದರೆ ಮಾಂತ್ರಿಕನ ಕಡೆಯವರು ಒಪ್ಪದೆ ಮುಂದುವರಿಸಿದರು. ಆಕೆಯ ಸ್ಥಿತಿ ಹದಗೆಟ್ಟಿರುವುದನ್ನು ಗಮನಿಸಿ ಕೊನೆಗೆ ಆಸ್ಪತ್ರೆಗೆ ಕಳುಹಿಸಲು ಒಪ್ಪಿಗೆ ನೀಡಿದರು. ಅಲ್ಲಿಗೆ ಕರೆದೊಯ್ದಾಗ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ವಿಚಾರ ತಿಳಿದ ಬಳಿಕ ಮಾಂತ್ರಿಕನ ಕಟುಂಬ ಪರಾರಿಯಾಗಿದೆ. ಅನುರಾಧಾಳ ಶವವನ್ನು ತಂದ ಕುಟುಂಬದವರು ಮಾಂತ್ರಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದರು. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು. ತಲೆ ಮರೆಸಿಕೊಂಡಿರುವ ಮಾಂತ್ರಿಕ ಮತ್ತು ಆತನ ಸಹಾಯಕರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.