ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬ ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ಫ್ಲ್ಯಾಟ್‌ಗಳಿಂದ ಕಳವು ಮಾಡುತ್ತಿದ್ದು, ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿರುಪಾಳ್ಯದ ಜಿಎಂ ಇನ್ವೀನೈಟ್ ಅಪಾರ್ಟ್‌ಮೆಂಟ್ ನಿವಾಸಿ ನಿತೇಶ್ ಸುಬ್ಬ ಬಂಧಿತ. ಪೊಲೀಸರು ಆರೋಪಿಯಿಂದ 621 ಚಿನ್ನಾಭರಣ, 15.79 ಗ್ರಾಂ ವಜ್ರ, 56.2 ಗ್ರಾಂ ಬೆಳ್ಳಿ ಹಾಗೂ 28 ಸಾವಿರ ನಗದು ಸೇರಿದಂತೆ ಒಟ್ಟು 60.46 ಲಕ್ಷ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಜಿಎಂ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ಸರಣಿ ಮನೆ ಕಳವು ನೆದಿತ್ತು. ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್ ಸೋಮಶೇಖರ್ ಹಾಗೂ ಸಂಜೀವ್ ನಾಯ್ಕ್ ನೇತೃತ್ವದ ತಂಡವು, ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ವ್ಯಕ್ತಿಯ ಚಲನವಲನ ದೃಶ್ಯಾವಳಿ ಸಿಕ್ಕಿದೆ. ಈ ಸುಳಿವು ಆಧರಿಸಿ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ವಿಚಾರಣೆ ನಡೆಸಿದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ನಿತೇಶ್ ಸುಬ್ಬು ಸೋದರಿ ಜತೆ ವಾಸವಾಗಿದ್ದು, ಆಕೆ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿ. ಮೊದಲು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಆರೋಪಿ, ಇತ್ತೀಚೆಗೆ ಯಾವುದೇ ಕೆಲಸವಿಲ್ಲದೆ ಅಲೆಯುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ಮನೆ ಕಳವು ಮಾರ್ಗ ನಿತೇಶ್ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಎಂ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಕ್ಕೂ ಅಧಿಕ ಫ್ಲ್ಯಾಟ್‌ಗಳಿದ್ದು, ಎಲ್ಲ ವಿಭಾಗಗಳಿಗೆ ಕೆಳಹಂತದಿಂದ ಹೋಗಲು ಸಂಪರ್ಕವಿದೆ. ಫ್ಲ್ಯಾಟ್‌ಗಳಿಗೆ ಹೋಗಿ ನಿತೇಶ್ ಕಾಲಿಂಗ್ ಬೆಲ್ ಮಾಡುತ್ತಿದ್ದ. ಆಗ ಯಾರಾದರೂ ಬಾಗಿಲು ತೆರೆದರೆ ಓಡಿ ಹೋಗುತ್ತಿದ್ದ. ಬಾಗಿಲು ತೆರೆಯದಿದ್ದರೆ ಆ ಫ್ಲ್ಯಾಟ್ ಬಾಗಿಲು ಮುರಿದು ಕೈ ಸಿಕ್ಕಿದ್ದನ್ನು ನಿತೇಶ್ ದೋಚುತ್ತಿದ್ದ. ಅದೇ ರೀತಿ ಮೂರು ಫ್ಲ್ಯಾಟ್‌ಗಳಿಗೆ ಆರೋಪಿ ಕನ್ನ ಹಾಕಿದ್ದ. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದರು.