ಬೆಂಗಳೂರಿನಲ್ಲಿ ಓಲಾ ಕಂಪನಿ ಸಿಬ್ಬಂದಿ ಅನಾಮಾನಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಸಂಬಂಧ ಓಲಾ ಎಲೆಕ್ಟ್ರಿಕ್ ಕಂಪನಿ ಸಿಇಒ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿಇಒ ಭವೇಶ್, ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ವಿರುದ್ಧ ಕೇಸ್ ದಾಖಲಾಗಿದೆ.
ಕಂಪನಿಯ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ.ಅರವಿಂದ್ ಸೆ. 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅರವಿಂದ್ ಸಾವಿನ ಎರಡು ದಿನಗಳ ನಂತರ ಅವರ ಖಾತೆಗೆ ಕಂಪನಿಯಿಂದ 17 ಲಕ್ಷ 46 ಸಾವಿರ ಹಣ ಜಮೆ ಆಗಿತ್ತು. ಈ ಬಗ್ಗೆ ಅನುಮಾನದಿಂದ ಕಂಪನಿಯವರನ್ನು ಕುಟುಂಬ ಪ್ರಶ್ನಿಸಿದ್ದು, ಆ ವೇಳೆ ಕಂಪನಿಯ ಹೆಚ್ಆರ್ ಸೇರಿದಂತೆ ಕೆಲವು ಸಿಬ್ಬಂದಿಯಿಂದ ಸರಿಯಾದ ಮಾಹಿತಿ ಸಿಕ್ಕಿಲ್ಲ, ಹೀಗಾಗಿ ಕುಟುಂಬಸ್ಥರು ಮನೆಯಲ್ಲಿ ಪರಿಶೀಲಿಸಿದಾಗ ಡೆತ್ ನೋಟ್ ಪತ್ತೆಯಾಗಿತ್ತು.
ಅರವಿಂದ್ ಬರೆದಿದ್ದ 28 ಪುಟಗಳ ಡೆತ್ ನೋಟ್ ನಲ್ಲಿ ಕೆಲಸದ ವಿಚಾರವಾಗಿ ಸುಬ್ರತ್ ಕುಮಾರ್, ಸಿಇಒ ಭವೀಶ್ ಅಗರ್ವಾಲ್ ಇಬ್ಬರೂ ತೀವ್ರ ಒತ್ತಡ ನೀಡುತ್ತಿದ್ದಾರೆ. ಭತ್ಯೆ ಮತ್ತು ವೇತನ ನೀಡದೆ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ಡೆತ್ ನೋಟ್ ಆಧಾರದಲ್ಲಿ ಅರವಿಂದ್ ಕುಟುಂಬಸ್ಥರು ದೂರು ನೀಡಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಟಿ ಮಾಲ್ನಿಂದ ಬಿದ್ದು ಯುವಕ ಸಾವು
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನಿಂದ ಬಿದ್ದು ಯುವಕ ಮೃತಪಟ್ಟಿದ್ದಾನೆ, ಬೆಳಗ್ಗೆ ಮಾಲ್ನ 3ನೇ ಮಹಡಿಯಿಂದ ಬಿದ್ದು ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಕೆಪಿ ಅಗ್ರಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಆಯತಪ್ಪಿ ಬಿದ್ದಿರುವದೇ ಎಂದು ತನಿಖೆ ನಡೆಯುತ್ತಿದೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ.