ವಡೋದರಾ: ಸೇತುವೆಯೊಂದು ಕುಸಿದ ಪರಿಣಾಮ ಹಲವಾರು ವಾಹನಗಳು ನದಿಗೆ ಬಿದ್ದಿದ್ದು, 9 ಮಂದಿ ಮೃತಪಟ್ಟ ಘಟನೆ ಗುಜರಾತ್ ನಲ್ಲಿ ಮಂಗಳವಾರ ಸಂಭವಿಸಿದೆ.
ಪದ್ರಾ ತಾಲೂಕಿನ ವಡೋದರಾ ಬಳಿಯ ಆನಂದ ಮತ್ತು ವಡೋದರಾ ಸಂಪರ್ಕಿಸುವ ಗಂಭೀರ-ಮುಜಾಪುರ್ ಸೇತುವೆ ಕುಸಿದು ಬಿದ್ದಿದೆ.
ಮಂಗಳವಾರ ಪೀಕ್ ಅವರ್ಸ್ ನಲ್ಲಿ ಸೇತುವೆ ಕುಸಿದುಬಿದ್ದಿದೆ. ಸೇತುವೆ ಕುಸಿದು ಬೀಳುವಾಗ ವಾಹನಗಳು ಸಂಚರಿಸುತ್ತಿದ್ದರಿಂದ ಹಲವಾರು ವಾಹನಗಳು ನದಿಗೆ ಬಿದ್ದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ.
ಸೇತುವೆ ಕುಸಿದು ಬೀಳುವ ಮುನ್ನ ದೊಡ್ಡ ಶಬ್ಧ ಕೇಳಿ ಬಂದಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸೇತುವೆ ಕುಸಿಯುತ್ತಿದ್ದಂತೆ ರಕ್ಷಣೆಗೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಜೊತೆ ಸ್ಥಳೀಯರು ಕೈ ಜೋಡಿಸಿದ್ದಾರೆ.
ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಪದ್ರಾ ಶಾಸಕ ಚೈತನ್ಯಸಿನ್ಹಾ ಜಾಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಸೇತುವೆ ಇದಾಗಿದ್ದು, ಭಾರೀ ಪ್ರಮಾಣದಲ್ಲಿ ವಾಹನಗಳು ಇಲ್ಲಿ ಸಂಚರಿಸುತ್ತವೆ. ವಾಹನ ಸಂಖ್ಯೆ ಹೆಚ್ಚಳದ ಬಗ್ಗೆ ಸ್ಥಳೀಯರು ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಗಂಭೀರ ಸೇತುವೆ ಕೇವಲ ವಾಹನ ದಟ್ಟಣೆಗೆ ಮಾತ್ರವಲ್ಲ, ಆತ್ಮಹತ್ಯೆ ಜಾಗ ಎಂದು ಕೂಡ ಕುಖ್ಯಾತಿ ಪಡೆದಿದೆ. ಸೇತುವೆ ದುಸ್ಥಿತಿಯ ಬಗ್ಗೆ ಹಲವಾರು ಬಾರಿ ಗಮನ ಸೆಳೆದರೂ ಯಾರೂ ಕ್ರಮ ಕೈಗೊಳ್ಳಲು ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.