ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿದು ಗಾಯಗೊಂಡ 15 ಒಳಗಿನ ವರ್ಷದ ಮೂರು ಮಕ್ಕಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪಟಾಕಿ ಸಿಡಿಸುವಾಗ ನೋಡುತ್ತಿದ್ದ ಮೂರು ವರ್ಷದ ಮಗುವೊಂದಕ್ಕೆ ಗಾಯವಾಗಿದೆ.
ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಗಾಯಗೊಂಡು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 71 ಜನ, ನಾರಾಯಣ ನೇತ್ರಾಲಯದಲ್ಲಿ 70 ಜನ ಚಿಕಿತ್ಸೆ ಪಡೆದುಕೊಂಡಿದ್ದರು. ಪಟಾಕಿ ಹಚ್ಚುವ ಸ್ಥಳದ ಹತ್ತಿರದಲ್ಲಿ ನೀರು ಇಟ್ಟುಕೊಳ್ಳುವುದು, ಬಳಕೆಯಾದ ಪಟಾಕಿಗಳನ್ನು ಮತ್ತು ಹಾರದೆ ಠುಸ್ ಆದ ಪಟಾಕಿಗಳನ್ನು ಎಸೆಯುವ ಮೊದಲು ನೀರಿನಲ್ಲಿ ನೆನೆಸಿಟ್ಟು ಅದನ್ನು ಬಿಸಾಕುವುದು, ಪಟಾಕಿ ಹಚ್ಚುವಾಗ ಅಂತರ ಕಾಯ್ದುಕೊಳ್ಳುವುದು, ಕಿಡಿಗಳಿಂದ ಕಣ್ಣುಗಳನ್ನು ರಕ್ಷಿಸಲು ಸುರಕ್ಷತಾ ಕನ್ನಡಕ ಧರಿಸುವುದು, ಸುರು ಸುರು ಬತ್ತಿಗಳನ್ನು ಮುಖ ಮತ್ತು ದೇಹದಿಂದ ಸಾಧ್ಯವಾದಷ್ಟು ದೂರವಿಟ್ಟು ಅವುಗಳನ್ನು ಅಡ್ಡವಾಗಿ ಹಿಡಿಯುವುದು.
ಪೋಷಕರು ಮಕ್ಕಳ ಮೇಲೆ ನಿಗಾ ಇಡುವುದು, ಒಣ ಎಲೆಗಳು, ವಾಹನಗಳು ಅಥವಾ ಕಟ್ಟಡಗಳು ಇಲ್ಲದಿರುವ ವಿಶಾಲ ಪ್ರದೇಶಗಳಲ್ಲಿ ಪಟಾಕಿ ಹೊಡೆಯುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಠುಸ್ ಆದ ಪಟಾಕಿಗಳನ್ನು ಮರು ಹೊಡೆಯಬಾರದು, ಮುಚ್ಚಿದ ಪಾತ್ರೆಗಳನ್ನು ಉಪಯೋಗಿಸಬಾರದು, ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಉಪಯೋಗಿಸಬಾರದು, ಕಾಂಟ್ಯಾಕ್ಟ್ ಲೆನ್ಸ್‌ಗಳ ಬದಲಿಗೆ ಕನ್ನಡಕ ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.