ಕರ್ನಾಟಕ ಸೇರಿ ದೇಶದ ನಾನಾ ಕಡೆ ವಿಧ್ವಂಸಕ ಕೃತ್ಯಕ್ಕೆ ಜೈಲಿನಿಂದಲೇ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದ 5 ಕಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಿಎಆರ್ ಪೊಲೀಸ್ ಅಧಿಕಾರಿ ಸೇರಿ ಮೂವರು ಶಂಕಿತ ಉಗ್ರರರನ್ನು ಬಂಧಿಸಿದೆ.
ಶಂಕಿತ ಉಗ್ರನಿಗೆ ಸಹಾಯ ಮಾಡಿರುವ ಶಂಕೆಯಲ್ಲಿ ಚಿಂತಾಮಣಿ ಮೂಲದ ನಗರದ ಟ್ಯಾಂಕ್ ಬಂಡ್ ನಿವಾಸಿ ಮನೋವೈದ್ಯ ನಾಗರಾಜ್ ಎಂಬಾತನನ್ನು ಬಂಧಿಸಲಾಗಿದೆ. ಟೆರರಿಸಂ ಬಗ್ಗೆ ಮೈಂಡ್ ವಾಶ್ ಮಾಡೋದ್ರಲ್ಲಿ ಮಾಸ್ಟರ್ ಆಗಿದ್ದ ಉಗ್ರ ನಾಸೀರ್ಗೆ ನಾಗರಾಜ್ ಸಹಾಯ ಮಾಡಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ಸತೀಶ್ ಗೌಡ ಎಂಬಾತನಿಗೆ ಎನ್ಐಎ ನೋಟಿಸ್ ನೀಡಿದೆ. ಶಂಕಿತರಿಗೆ ಸಿಮ್ ಕಾರ್ಡ್ ನೀಡಿದ ಆರೋಪದ ಮೇಲೆ ಸತೀಶ್ ಗೌಡಗೆ ನೋಟಿಸ್ ನೀಡಲಾಗಿದೆ.
ನಾಸೀರ್ ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲಾನ್ ಮಾಡಿ ಯುವಕರ ತಂಡ ತಯಾರು ಮಾಡಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಬ್ಲಾಸ್ಟ್ ಗಳ ಮಾಸ್ಟರ್ ಮೈಂಡ್ ಈ ನಾಸೀರ್ ಎನ್ನಲಾಗಿದೆ. 2008ರ ಸರಣಿ ಬಾಂಬ್, ಮಂಗಳೂರು ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ಕಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಕೇಸ್ ಗಳಲ್ಲಿದೆ ಈ ನಾಸೀರ್ ಕೈವಾಡವಿರುವ ಮಾಹಿತಿ ಇದೆ.
ಸ್ಲೀಪರ್ ಸೆಲ್ಸ್ ಗೆ ನೇರ ಸಂಪರ್ಕ ಹೊಂದಿರುವ ನಾಸೀರ್ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಹಾಕಿದ್ದ. ಇದಕ್ಕಾಗಿ ಕೊಲೆ ಕೇಸಲ್ಲಿ ಜೈಲಲ್ಲಿದ್ದ ಯುವಕರ ಯುವಕರ ಮೈಂಡ್ ವಾಶ್ ಮಾಡಿದ್ದ. ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಎಂಬ ಯುವಕರ ತಂಡ ಸಿದ್ಧಗೊಳಿಸಿದ್ದ.
ಜೀವಂತ ಗ್ರನೈಡ್ ಗಳು, ಪಿಸ್ತೂಲ್ ಗಳು, ಸ್ಫೋಟಕ ವಸ್ತುಗಳ ಸಮೇತ ಯುವಕರ ತಂಡ ಆರ್ ಟಿ ನಗರ, ಹೆಬ್ಬಾಳದಲ್ಲಿ ಸಿಕ್ಕಿ ಬಿದ್ದಿದ್ದು, ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡಿತ್ತು. ಪ್ರಮುಖ ಆರೋಪಿ ಜುನೈದ್ ಗಾಗಿ ಎನ್ಐಎ ಶೋಧ ಮುಂದುವರಿಸಿದೆ. ಸದ್ಯ ಮೂವರನ್ನು ಬಂಧಿಸಿದೆ. ಬಂಧಿತರ ಬಳಿಯಿಂದ ಹಣ, ಕಮ್ಯುನಿಕೇಷನ್ ಗೆ ಬಳಸುವ ವಾಕಿಟಾಕಿ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.