Menu

ವಿರಳಾತಿವಿರಳ Hyper-IgE Syndrome: ಸರ್ಕಾರದಿಂದ ಚಿಕಿತ್ಸೆಗೆ ಹಣ ಸಿಗದೆ ಸುಳ್ಯದ ಚಾಂದಿನಿ ಸಾವು

ಅಪರೂಪದಲ್ಲಿ ಅಪರೂಪದ ಕಾಯಿಲೆ (ಹೈಪರ್-IgE ಸಿಂಡ್ರೋಮ್‌)ಯಿಂದ ಬಳಲುತ್ತಿದ್ದ ದಕ್ಷಿಣ ಕನ್ನಡದ ಸುಳ್ಯ ಗಾಂಧಿನಗರ ನಿವಾಸಿ ಚಾಂದಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  ಕಳೆದ ಕೆಲವು ವರ್ಷಗಳಿಂದ ಚಾಂದಿನಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಚಾಂದಿನಿಯವರನ್ನು ಕಾಡುತ್ತಿದ್ದ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗೆ ಬಹಳಷ್ಟು ಸಮಯ ಹಿಡಿದಿತ್ತು.

ಕೊನೆಗೆ ಹೈಪರ್-IgE ಸಿಂಡ್ರೋಮ್‌ ಎಂಬುದು ಪತ್ತೆಯಾಗಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಸುಳ್ಯ ತಾಲೂಕಿನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಚಾಂದಿನಿ ಆರೋಗ್ಯ ತೀರಾ ಹದಗೆಟ್ಟಿತ್ತು. ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಈ ಕಾಯಿಲೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸುಳ್ಯ, ಮಂಗಳೂರು ಸೇರಿದಂತೆ ಹಲವೆಡೆ ಚಿಕಿತ್ಸೆ ಪಡೆದಿದರೂ ಗುಣಮುಖರಾಗಿರಲಿಲ್ಲ. ಚಾಂದಿನಿ ಅವರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಜಿಲ್ಲಾ ಮಟ್ಟದಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿತ್ತು.

ಬಳಿಕ ಅವರನ್ನು ಹೈದರಾಬಾದ್​ ನ ಎಐಜಿ ಆಸ್ಪತ್ರೆಗೆ ದಾಖಲಿಸಿದಾಗ ಆ ಕಾಯಿಲೆಯನ್ನೂ ಆಸ್ಪತ್ರೆ ಪತ್ತೆ ಮಾಡಿದ್ದು, ಆ ವರದಿಯನ್ನು ಚಾಂದಿನಿ ಕರ್ನಾಟಕ ಸರ್ಕಾರಕ್ಕೆ ನೀಡಿದ್ದರು. ಚಿಕಿತ್ಸೆಗೆ ಸರ್ಕಾರ ಸಕಾಲದಲ್ಲಿ ಹಣ ಬಿಡುಗಡೆ ಮಾಡದ ಕಾರಣ ನಿಗದಿತ ಆಸ್ಪತ್ರೆಗಳಲ್ಲಿ ಚಾಂದಿನಿ ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ ಎನ್ನಲಾಗಿದೆ.

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಹೈಪರ್-IgE ಸಿಂಡ್ರೋಮ್‌ ನಿಂದ ಬಳಲುತ್ತಿರುವವರಲ್ಲಿ ಚರ್ಮದ ಸಮಸ್ಯೆ ಸೇರಿ ಜೀರ್ಣಾಂಗ, ಉಸಿರಾಟದ ತೊಂದರೆ ಮತ್ತು ನರ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಚರ್ಮ ಕೆಂಪಾಗುವುದು, ಉಬ್ಬಸ, ಮಲಬದ್ಧತೆ, ಹೊಟ್ಟೆ ನೋವು, ಬ್ರೇನ್​ ಫಾಗ್​, ಹಲ್ಲಿನ ಸಮಸ್ಯೆಗಳು ಸೇರಿ ಹತ್ತು ಹಲವು ಲಕ್ಷಣಗಳು ಕಂಡುಬರುತ್ತವೆ.

ಚಾಂದಿನಿ ಅವರಿಗಿದ್ದ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲೇ ಆರೋಗ್ಯ ಇಲಾಖೆಗೆ ಬಹಳ ಸಮಯ ಹಿಡಿದಿತ್ತು. ಅದೊಂದು ವಿರಳಾತಿವಿರಳ ಕಾಯಿಲೆ ಎಂಬುದು ಗೊತ್ತಾಗಿದ್ದು, ಇದಕ್ಕೆ ಹೈದರಾಬಾದ್​ನ ಆಸ್ಪತ್ರೆಯೊಂದರಲ್ಲಿ ಚಾಂದಿನಿಯವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮುಂದಿದ್ದ ಅಗತ್ಯ ಚಿಕಿತ್ಸೆಗೆ ಸರ್ಕಾರ ಸಕಾಲದಲ್ಲಿ ಹಣ ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸಿದ ಕಾರಣ ಅವರು ಮೃತಪಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.

Related Posts

Leave a Reply

Your email address will not be published. Required fields are marked *