ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ್ದಾಳೆ. ಹಾಸನದ ಬೇಲೂರು ತಾಲೂಕಿನ ಪ್ರಸಾದಹಳ್ಳಿ ಗ್ರಾಮದ ಮಂಜುನಾಥ್ ಅವರ ಪುತ್ರಿ ಸಿಂಚನಾ (24) ನದಿಗೆ ಹಾರಿರುವ ಯುವತಿ.
ಸಿಂಚನಾ ಎಂಸಿಎ ಪದವೀಧರೆಯಾಗಿದ್ದು, ಕೆಲವು ವರ್ಷಗಳಿಂದ ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿದ್ದು, ಮಾನಸಿಕ ಖಿನ್ನತೆಗೆ ಒಳಾಗಾಗಿದ್ದರು ಎಂದು ಹೇಳಲಾಗಿದೆ. ಮಂಗಳವಾರ ಸಂಜೆ ಮನೆಯಿಂದ ಹೊರಟು ಹಾಸನ ಮೂಲಕ ಚನ್ನರಾಯಪಟ್ಟಣ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬಸ್ಸಿನಲ್ಲಿ ಬಂದು ಉತ್ತರ ಕಾವೇರಿಯ ಸೇತುವೆ ಮೇಲಿಂದ ರಾತ್ರಿ ಕಾವೇರಿ ನದಿಗೆ ಹಾರಿದ್ದಾರೆ. ಗಮನಿಸಿದ ಸ್ಥಳಿಯ ದಾರಿಹೋಕ ವಾಹನ ಸವಾರರು ತಕ್ಷಣ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಬಂದು ನದಿ ತೀರದ 1 ಕಿಮಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ.
ಸ್ಥಳದಲ್ಲಿ ಸಿಕ್ಕ ಬ್ಯಾಗ್, ಆಧಾರ್ ಕಾಡ್೯ ಹಾಗೂ ಚಪ್ಪಲಿಗಳ ಆಧಾರದ ಮೇಲೆ ಈಕೆಯೇ ನದಿಗೆ ಹಾರಿದ್ದಾಳೆ ಎಂಬ ಅನುಮಾನದಿಂದ ಕುಟುಂಬಸ್ಥರಿಗೆ ಮಾಹಿತಿ ತಲುಪಿಸಿದ್ದಾರೆ. ತುಂಬಿ ಹರಿಯುತ್ತಿರುವ ಕಾವೇರಿಯ ಪ್ರವಾಹದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು (ಬುಧವಾರ) ಮುಂಜಾನೆಯಿಂದಲೇ ಹುಡುಕಾಟ ಆರಂಭಿಸಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.