ನಾನು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಭಾರಿ ಪ್ರಮಾಣದ ಸುಂಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯೊಡ್ಡಿದ್ದಾರೆ.
ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಯಾವುದೇ ಇತ್ತೀಚಿನ ಸಂಭಾಷಣೆಯ ಬಗ್ಗೆ ತಿಳಿದಿಲ್ಲ ಎಂಬ ಭಾರತ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಕೇಳಿದ್ದಕ್ಕೆ, ಅವರು ಹಾಗೆ ಹೇಳಲು ಬಯಸಿದರೆ ಮುಂದೆ ಅವರು ಬೃಹತ್ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸಬೇಕಾಗುತ್ತದೆ ಎಂದು ಉತ್ತರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಭಾರತದ ಮೇಲೆ 25% ಸುಂಕವನ್ನು ಹೇರಿದ್ದರು. ಬಳಿಕ ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ವಧಿಸಿದ್ದಾರೆ. ಈಗ ಭಾರತದಿಂದ ಅಮೆರಿಕ್ಕೆ ಆಮದಾಗುವ ವಸ್ತುಗಳ ಮೇಲೆ 50% ಸುಂಕ ಹೇರಲಾಗಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕೆ ಚೀನಾ ಮೇಲೆ 100% ಸುಂಕವನ್ನು ಟ್ರಂಪ್ ಘೋಷಿಸಿದ್ದಾರೆ. ಹೊಸ ಸುಂಕ ನೀತಿಗಳು ನ.1 ರಿಂದ ಜಾರಿಗೆ ಬರಲಿದೆ.
ಕೆಲವು ದಿನಗಳ ಹಿಂದೆ ಕೂಡ ಟ್ರಂಪ್ ನಾನು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದಿದ್ದರು. ಬಳಿಕ ಪ್ರತಿಕ್ರಿಯಿಸಿದ ಭಾರತ ಸರ್ಕಾರವು ನಮ್ಮ ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಭಾರತ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರತಿಕ್ರಿಯಿಸಿತ್ತು.