ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಪೂರ್ಣಿಮಾ ರಾಠೋಡ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬ ಸದಸ್ಯರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅರೆಬೆಂಚಿ ತಾಂಡದ ನಿವಾಸಿ ಪೂರ್ಣಿಮಾ ಅವರಿಗೆ ಹೆರಿಗೆ ನೋವು ಉಂಟಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶನಿವಾರ ಮಧ್ಯಾಹ್ನ ಪೂರ್ಣಿಮಾ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆರಿಗೆ ನಂತರ ಆರೋಗ್ಯವಾಗಿಯೇ ಇದ್ದರು. ಸಂಜೆ ಹೃದಯಾಘಾತವಾಗಿ ಅಸು ನೀಗಿದ್ದಾರೆ. ಅಸ್ವಸ್ಥಗೊಂಡ ಸಮಯದಲ್ಲಿ ವೈದ್ಯರು ಬಾರದೇ ನರ್ಸಗಳು ಆಕೆಗೆ ಇಂಜೆಕ್ಷನ್ ಕೊಟ್ಟರು. ಇಂಜೆಕ್ಷನ್ ಕೊಟ್ಟ ನಂತರ ಸ್ಥಿತಿ ಹದಗೆಟ್ಟು ಪ್ರಾಣ ಹೋಗಿದೆ ಎಂದು ಕುಟುಂಬ ಸದಸ್ಯರು ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಆರೋಪಿಸಿದ್ದಾರೆ.
ಬಾಣಂತಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗಿತ್ತು. ಸಿಜೇರಿಯನ್ ನಂತರ ಸಂಜೆ ಅವರ ರಕ್ತದೊತ್ತಡ ಕುಸಿದು ಹೃದಯಾಘಾತವಾಯಿತು. ಬದುಕಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ, ಅವರು ಬದುಕಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.