ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಅಂದು ರಾತ್ರಿ ಸುರಿಯುತ್ತಿದ್ದ ಮಳೆಯ ತೀವ್ರತೆ ಮಲಗಿದ್ದ ನಿವಾಸಿಗಳ ಅರಿವಿಗೆ ಬಂದಿರಲಿಲ್ಲ. ಆದರೆ ಮಧ್ಯರಾತ್ರಿ ವೇಳೆಗೆ ನರೇಂದ್ರ ಎಂಬವರ ಮನೆಯ ಎರಡನೇ ಮಹಡಿಯಲ್ಲಿ ಸಾಕು ನಾಯಿ ಇದ್ದಕ್ಕಿದ್ದಂತೆ ಬೊಗಳಲು ಆರಂಭಿಸಿದೆ. ಮಧ್ಯರಾತ್ರಿ ನಾಯಿ ಈ ಪರಿ ಬೊಗಳುತ್ತಿರುವುದೇಕೆ ಎಂದು ನರೇಂದ್ರ ಅವರು ಎದ್ದು ಬಂದಾಗ ಪರಿಸ್ಥಿತಿ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿದ್ದು, ನೋಡುತ್ತಿರುವಾಗಲೇ ಆ ಬಿರುಕಿನ ಮೂಲಕ ನೀರು ಮನೆ ಒಳಗಡೆ ನುಗ್ಗಲಾರಂಭಿಸಿದೆ. ನೀರು ಮನೆಗೆ ನುಗ್ಗಿದೆ ಎಂಬುದು ತಿಳಿಯುವಷ್ಟರಲ್ಲಿ ಕೆಳಗಡೆ ಮಲಗಿದ್ದ ಕುಟುಂಬದ ಸದಸ್ಯರನ್ನು ಎಬ್ಬಿಸಿ ನಾಯಿ ಜೊತೆ ಕೂಡಲೇ ಹೊರ ಬಂದಿದ್ದಾರೆ.
ಬಳಿಕ ನರೇಂದ್ರ ಅವರು ನೆರೆ ಹೊರೆಯ ನಿವಾಸಿಗಳನ್ನು ಎಬ್ಬಿಸಿ ಮನೆಯಿಂದ ಹೊರ ಬಂದು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಸುರಿಯುತ್ತಲೇ ಇದ್ದ ಮಲೆ ಮಧ್ಯೆ ಕೂಡಲೇ ನಿವಾಸಿಗಳು ಮನೆ ತೊರೆದು ಸುರಕ್ಷಿತ ಜಾಗಗಳಿಗೆ ಓಡಿದ್ದಾರೆ. ಮನೆ ತೊರೆದ ಸ್ವಲ್ಪ ಹೊತ್ತಿಗೆ ಆ ನಿವಾಸಿಗಳು ಮಲಗಿದ್ದ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಭೂಕುಸಿತ ಸಂಭವಿಸಿ ಹಲವು ಮನೆಗಳು ನೆಲಸಮವಾಗಿದೆ.
ಹೀಗೆ ನಾಯಿ ಸರಿಯಾದ ಸಮಯಕ್ಕೆ ಎಚ್ಚರಿಸಿದ್ದ ಕಾರಣ ಕೊನೆಯ ಕ್ಷಣದಲ್ಲಿ ದುರಂತದಿಂದ ಬದುಕುಳಿದ 67 ಮಂದಿ ಇನ್ನೂ ತ್ರಿಯಂಬಲ ಗ್ರಾಮದಲ್ಲಿರುವ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಜೂನ್ 30 ರಂದು ಮಧ್ಯರಾತ್ರಿ ಧಾರಾಕಾರ ಮಳೆ ಸುರಿದು ಬಹಳಷ್ಟು ಅನಾಹುತಗಳಿಗೆ ಕಾರಣವಾಗಿತ್ತು. ಮೇಘಸ್ಫೋಟ ಸಂಭವಿಸಿ 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.