ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಗೊಂಡನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮರಗೊಂಡನಹಳ್ಳಿಯಲ್ಲಿ ವಾಸವಿದ್ದ ನಿವಾಸಿ ಪ್ರಶಾಂತ್ ಬಂಧಿತ, ಮೂರು ದಿನಗಳ ಹಿಂದೆ ಪತ್ನಿ ರೇಷ್ಮಾಳನ್ನು ಕೊಂದು ತಪ್ಪಿಸಿಕೊಂಡಿದ್ದ.
ಮೃತ ರೇಷ್ಮಾಳ ಸೋದರಿ ನೀಡಿದ ದೂರಿನ ಅನ್ವಯ ಆರೋಪಿ ಬಂಧನವಾಗಿದೆ. ಕಲುಬರಗಿ ಜಿಲ್ಲೆಯ ರೇಷ್ಮಾ 5 ವರ್ಷಗಳ ಹಿಂದೆ ಪತಿ ಮೃತಪಟ್ಟ ಬಳಿಕ ಮಗಳ ಜತೆ ನಗರಕ್ಕೆ ಬಂದು ನೆಲೆಸಿದ್ದಳು. ಹೆಬ್ಬಗೋಡಿ ಸಮೀಪ ಮರಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಎರಡು ವರ್ಷಗಳ ಹಿಂದೆ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ವಿಜಯನಗರ ಹೂವಿಡಗಲಿ ತಾಲೂಕಿನ ಎಲೆಕ್ಟ್ರಿಶಿಯನ್ ಪ್ರಶಾಂತ್ ಪರಿಚಯ ಆಗಿ ಕ್ರಮೇಣ ಪ್ರೀತಿಗೆ ತಿರುಗಿದೆ. ಒಂಬತ್ತು ತಿಂಗಳ ಹಿಂದೆ ಹೂವಿನಹಡಗಲಿಗೆ ಕರೆದೊಯ್ದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರೇಷ್ಮಾಳನ್ನು ಪ್ರಶಾಂತ್ ಮದುವೆಯಾಗಿದ್ದ. ವಿವಾಹವಾದ ಬಳಿಕ ಮರಗೊಂಡನಹಳ್ಳಿಯಲ್ಲಿ ದಂಪತಿ ನೆಲೆಸಿದ್ದರು.
ಇತ್ತೀಚೆಗೆ ಪತ್ನಿ ಪರ ಪುರುಷನ ಸಹವಾಸದಲ್ಲಿ ಪತ್ನಿ ಇದ್ದಾಳೆ ಎಂಬ ಶಂಕೆ ಹುಟ್ಟಿ ಮನೆಯಲ್ಲಿ ಆಗಾಗ್ಗೆ ಸತಿ-ಪತಿ ಮಧ್ಯೆ ಜಗಳವಾಗುತ್ತಿದ್ದವು. ಅ.18 ರಂದು ಬೆಳಗ್ಗೆ ಪ್ರಶಾಂತ್ ಹಾಗೂ ರೇಷ್ಮಾ ಮಧ್ಯೆ ಗಲಾಟೆಯಾಗಿದೆ. ಕೆರಳಿದ ಆರೋಪಿ ರೇಷ್ಮಾಳ ಕಪಾಳಕ್ಕೆ ಹೊಡೆದಿದು, ಆಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಮೃತದೇಹವನ್ನು ಸ್ನಾನದ ಮನೆಗೆ ಎಳೆದೊಯ್ದು ಆರೋಪಿ ಟಬ್‌ನಲ್ಲಿ ನೀರು ತುಂಬಿಸಿ ವಿದ್ಯುತ್ ಹೀಟರ್ ಹಾಕಿದ್ದಾನೆ. ವಿದ್ಯುತ್ ಶಾಕ್‌ನಿಂದ ಪತ್ನಿ ಮೃತಪಟ್ಟಿದ್ದಾಳೆಂದು ಸುಳ್ಳು ಹೇಳಿ ಜನರನ್ನು ನಂಬಿಸಲು ಯತ್ನಿಸಿದ್ದಾನೆ. ಆದರೆ ಶಾಲೆ ಮುಗಿಸಿ ಮನೆಗೆ ಬಂದ ರೇಷ್ಮಾಳ ಮಗಳು ಸ್ನಾನಗೃಹದಲ್ಲಿ ಪ್ರಜ್ಞಾಹೀನಳಾಗಿದ್ದ ತಾಯಿ ಕಂಡು ಆತಂಕಗೊಂಡಿದ್ದಾಳೆ. ಕೂಡಲೇ ಸಂಬಂಧಿಕರಿಗೆ ತಿಳಿಸಿದ್ದಾಳೆ. ಬಳಿಕ ಪೊಲೀಸರಿಗೆ ಮೃತಳ ಸೋದರಿ ದೂರು ನೀಡಿದ್ದಳು.
ತಾಯಿಯ ಶೀಲ ಶಂಕಿಸಿ ತಂದೆ ಗಲಾಟೆ ಮಾಡುತ್ತಿದ್ದುದಾಗಿ ಮಗಳು ಹೇಳಿಕೆ ಕೊಟ್ಟಿದ್ದನ್ನು ಆಧರಿಸಿ ಪ್ರಶಾಂತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ವಿದ್ಯುತ್ ಶಾಕ್‌ನಿಂದ ರೇಷ್ಮಾ ಮೃತಪಟ್ಟಿದ್ದಾಳೆ ಎಂದು ಆರೋಪಿ ಹೇಳಿದ್ದ. ವಿದ್ಯುತ್ ಶಾಕ್ ಆಗಿಲ್ಲವೆಂದು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಸ್ಪಷ್ಟಪಡಿಸಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ ಮತ್ತೆ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರ ಬಂದಿದೆ.