Menu

ಬಾಕಿ ಬಿಲ್ ಕೊಡಿ ಎಂದು ಕೇಳಿದರೆ ಅದು “ಧಮ್ಕಿ” ಹೇಗೆ ಆಗುತ್ತದೆ: ಆರ್‌. ಅಶೋಕ್‌

ಬಾಕಿ ಬಿಲ್ ಕೊಡದಿದ್ದರೆ ತಮ್ಮ ಹಕ್ಕಿಗಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಗುತ್ತಿಗೆದಾರರು  ಹೇಳುವುದು “ಧಮ್ಕಿ” ಹೇಗೆ ಆಗುತ್ತದೆ ಉಪಮುಖ್ಯಮಂತ್ರಿಗಳೇ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಬಹುಶಃ ರಾಹುಲ್‌ ಗಾಂಧಿ  ಅವರು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರಿಕರಿಗೆ ಮುಷ್ಕರ, ಹೋರಾಟ ಮಾಡುವ ಹಕ್ಕಿಲ್ಲ ಅನ್ನಿಸುತ್ತೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಾಗರಿಕರು, ಗುತ್ತಿಗೆದಾರರು ತಮ್ಮ ಹಕ್ಕಿಗಾಗಿ ಸರ್ಕಾರವನ್ನು ಪ್ರಶ್ನಿಸಲೂ ಬಹುದು, ಮುಷ್ಕರ ಮಾಡಬಹುದು, ಹೋರಾಟವನ್ನೂ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಇಷ್ಟಕ್ಕೂ ಗುತ್ತಿಗೆದಾರರ ಬಿಲ್ ಯಾಕೆ ಕ್ಲಿಯರ್ ಮಾಡುತ್ತಿಲ್ಲ,  ಒಂದಾ ಪಾಪರ್ ಸರ್ಕಾರದ ಬಳಿ ದುಡ್ಡಿಲ್ಲದೆ ಸಂಪೂರ್ಣವಾಗಿ ದಿವಾಳಿ ಆಗಿರಬೇಕು. ಇಲ್ಲಾ ನಿಮ್ಮ ಕಮಿಷನ್ ಬೇಡಿಕೆ ಈಡೇರಿಸಲಾಗದೆ ಗುತ್ತಿಗೆದಾರರು ನೀವು ಕೇಳುತ್ತಿರುವ ಪರ್ಸೆಂಟೇಜ್ ಗೆ ಒಪ್ಪದೇ ಇರಬಹುದು ಎಂದಿದ್ದಾರೆ.

ರಸ್ತೆಗುಂಡಿಗಳ ದುಸ್ಥಿತಿ ಬಗ್ಗೆ ದನಿ ಎತ್ತಿದ ಉದ್ಯಮಿಗಳಿಗೆ ಧಮ್ಕಿ ಹಾಕಿ ಅವಮಾನ ಮಾಡಿದ್ದಾಯ್ತು, ಈಗ ಗುತ್ತಿಗೆದಾರರಿಗೆ ಧಮ್ಕಿ ಹಾಕುತ್ತಿದೆ ಈ ಲಜ್ಜೆಗೆಟ್ಟ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ  ಪರಿಸ್ಥಿತಿ ಹೀಗೆ ಮುಂದುವರಿದರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರುವುದಿಲ್ಲ, ಯಾವ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡುವುದಿಲ್ಲ  ಎಂದು ಹೇಳಿದ್ದಾರೆ.

 

ಮತ್ತೊಂದು ಪೋಸ್ಟ್‌ನಲ್ಲಿ  ಸರ್ಕಾರದ ವಿರುದ್ಧ  ಕಿಡಿ ಕಾರಿರುವ ಅವರು, ನೆರೆಪೀಡಿತ ಪ್ರದೇಶಗಳಲ್ಲಿ ಕಾಟಾಚಾರದ ವೈಮಾನಿಕ ಸಮೀಕ್ಷೆ ಮಾಡಿ ಕೈತೊಳೆದುಕೊಂಡ ಸಿಎಂ @siddaramaiah ಸರ್ಕಾರ, ಲಕ್ಷಾಂತರ ರೈತ ಕುಟುಂಬಗಳು ಈ ದೀಪಾವಳಿಯನ್ನು ಕಗ್ಗತ್ತಲಲ್ಲಿ ಕಳೆಯುವ ದುಸ್ಥಿತಿಗೆ ದೂಡಿದೆ ಎಂದು ಆರೋಪಿಸಿದ್ದಾರೆ.

ಒಂದು ಕಡೆ ಕೇಂದ್ರ ಸರ್ಕಾರದ ಜಿಎಸ್ಟಿ ದರ ಇಳಿಕೆಯಿಂದ ಜನಸಾಮಾನ್ಯರು ತಮಗೆ ಇಷ್ಟವಾದ ವಸ್ತುಗಳನ್ನು ಕೊಳ್ಳುವ ಮೂಲಕ ಸಂತೋಷದಿಂದ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆ ರಾಜ್ಯ @INCKarnataka ಸರ್ಕಾರದ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕ ಭಾಗದ ನೆರೆಪೀಡಿತ ರೈತರು ಪರಿಹಾರಕ್ಕಾಗಿ ಕಾದೂ ಕಾದು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ. ಈ ರೈತವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಅನ್ನದಾತರ ಶಾಪ ತಟ್ಟದೇ ಇರದು ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *