ಸಾಮಾನ್ಯವಾಗಿ ಚಿಕನ್ ಪ್ರಿಯರು ಅದರಲ್ಲಿ ನಾನಾ ವಿಧಗಳ ಪಾಕಶೈಲಿಯ ಅಡುಗೆಗಳನ್ನು ಮಾಡಿ ಸವಿದು ಆನಂದಿಸುತ್ತಾರೆ. ಚಿಕನ್ ಇಷ್ಟವಿದ್ದರೂ ಅದು ತಿಂದರೆ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆಗಳು ಬರುವ ಕಾರಣಕ್ಕೆ ಹಿಂದೇಟು ಹಾಕುವವರೂ ಹಲವರಿದ್ದಾರೆ.
ರುಚಿಗೆ ಮತ್ತು ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆ ದೂರಗೊಳಿಸಲು ಪಾಲಕ್ ಚಿಕನ್, ಮೆಂತೆ ಚಿಕನ್, ಪುದೀನ ಚಿಕನ್ ತಿನ್ನುವುದೂ ಇದೆ. ಆದರೆ ಚಿಕನ್ನಿಂದ ಉಂಟಾಗಬಹುದಾದ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆ ದೂರಗೊಳಿಸಲು ಇನ್ನೊಂದು ವಿಧಾನದಲ್ಲಿ ಚಿಕನ್ ಕರಿ ಮಾಡಬಹುದು. ಅದೇ ಬಸಳೆ ಚಿಕನ್. ಚಿಕನ್ ಸೇವನೆಯಿಂದ ಮಲಬದ್ಧತೆ ಉಂಟಾಗುವವರಿಗೆ ಬಸಳೆ ಚಿಕನ್ ಉತ್ತಮ ಆಯ್ಕೆ.
ಬಸಳೆ ಚಿಕನ್ ಮಾಡುವುದಾದರೆ ಪಾಲಕ್ ಚಿಕನ್ ಅಥವಾ ಮೆಂತೆ ಚಿಕನ್ಗೆ ಬೇಕಾದ ಮಸಾಲೆಯನ್ನೇ ಸಿದ್ಧಪಡಿಸಿದರೆ ಸಾಕು. ಹಾಗೆ ಮಸಾಲೆ ಸಿದ್ಧಪಡಿಸುವಾಗ ಖಾರ ಸ್ವಲ್ಪ ಕಮ್ಮಿ ಇರಬೇಕು. ಅರ್ಧ ಕೆಜಿ ಚಿಕನ್ಗೆ ಒಂದು ಲೋಟದಷ್ಟು ತೆಂಗಿನ ತುರಿ ರಸ ತೆಗೆದಿಟ್ಟುಕೊಳ್ಳಬೇಕು. ಚಿಕನ್ ಕರಿಗೆ ಬೇಕಾದ ಒಗ್ಗರಣೆ ಇಟ್ಟು ಚಿಕನ್ ಮಿಕ್ಸ್ ಮಾಡಿ ಮಸಾಲೆ ಸೇರಿಸಿ ಬೇಯಿಸಿದ ಬಳಿಕ ತೆಂಗಿನ ತುರಿ ರಸ ಸೇರಿಸಿ ಕುದಿಸಬೇಕು, ಹಾಗೆ ಕುದಿಯುತ್ತಿರುವಾಗ ನೂರು ಗ್ರಾಂನಷ್ಟು ಎಳೆಯ ಬಸಳೆ ಸೊಪ್ಪುಗಳನ್ನು ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಬೇಕು. ಅಷ್ಟಾದರೆ ಬಸಳೆ ಚಿಕನ್ ರೆಡಿ. ತಿಂದಾಗಲಷ್ಟೇ ಚಿಕನ್-ಬಸಳೆ ಕರಿ ರುಚಿ ಹೀಗೂ ಇರುತ್ತದೆಯೇ ಎಂದು ಅನಿಸುತ್ತದೆ.