ಸುಲಭವಾಗಿ ಬೆಳೆಸಬಹುದಾದ ದೊಡ್ಡಪತ್ರೆ ಮಳೆಗಾಲದಲ್ಲಿ ಶೀತ ಹಾಗೂ ಕೆಮ್ಮು ನಿಯಂತ್ರಣಕ್ಕೆ ಔಷಧಿಯಾದರೆ, ಬೇಸಿಗೆಯಲ್ಲಿ ತಂಪಾಗಿಸುವ ಗುಣ ಹೊಂದಿದೆ. ಹೀಗಾಗಿ ಇದನ್ನು ನಾನಾ ರೀತಿ ಅಡುಗೆಗಳಲ್ಲಿ ಬಳಸುವ ಮೂಲಕ ಆರೋಗ್ಯ ವರ್ಧಿಸಿಕೊಳ್ಳಬಹುದು.
ದೊಡ್ಡಪತ್ರೆ ಎಲೆಗಳು ಹಸಿವು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದು. ಚರ್ಮದ ಸಮಸ್ಯೆ ನಿವಾರಣೆಗೆ ಉಪಯುಕ್ತ. ಜಾಂಡಿಸ್‍ಗೆ ಮನೆಮದ್ದಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವಾತ ಸಮಸ್ಯೆಯನ್ನು ದೂರ ಮಾಡುತ್ತದೆ.
ದೊಡ್ಡಪತ್ರೆ ಎಲೆಗಳನ್ನು ಬಳಸಿಕೊಂಡು ಚಟ್ನಿ, ತಂಬುಳಿ, ದೋಸೆ, ಚಿತ್ರಾನ್ನ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೊಡ್ಡಪತ್ರೆ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಸ್ವಲ್ಪ ಬೆಲ್ಲ ಅಥವಾ ಉಪ್ಪು ಸೇರಿಸಿ ಪಾನಕ ಮಾಡಿ ಕುಡಿದರೆ ಬೇಸಿಗೆಯಲ್ಲಿ ತಂಪು ನೀಡುತ್ತದೆ.
ಚಟ್ನಿ ಮಾಡಬೇಕಾದರೆ ದೊಡ್ಡಪತ್ರೆ ಎಲೆಗಳನ್ನು ಹುರಿದು, ಕಾಯಿತುರಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆ ಅಥವಾ ಬೇರೆ ಹುಳಿ, ಬೆಲ್ಲ ಮತ್ತು ಉಪ್ಪು ಹಾಕಿ ರುಬ್ಬಿದರೆ ಮುಗೀತು. ಚಟ್ನಿ ರೆಡಿಯಾಗುವುದು. ತಂಬುಳಿ ಬೇಕಿದ್ದರೆ ದೊಡ್ಡಪತ್ರೆ ಎಲೆಗಳನ್ನು ಹುರಿದು, ಮೊಸರು, ಬೆಳ್ಳುಳ್ಳಿ, ಜೀರಿಗೆ ಮತ್ತು ಉಪ್ಪು ಹಾಕಿ ರುಬ್ಬಬೇಕು. ದೊಡ್ಡಪತ್ರೆ ಎಲೆಗಳನ್ನು ಮಸಾಲೆಯುಕ್ತ ಕಡಲೆ ಹಿಟ್ಟಿಗೆ ಸೇರಿಸಿ ಅದ್ದಿ ಕರಿಯುವುದರಿಂದ ಅದ್ಭುತವಾದ ದೊಡ್ಡಪತ್ರೆ ಬಜ್ಜಿ ತಿನ್ನಬಹುದು. ಹಿಟ್ಟಿಗೆ ದೊಡ್ಡಪತ್ರೆ ಎಲೆಗಳನ್ನು ಸೇರಿಸಿ ದೋಸೆ ಮಾಡಿ ರುಚಿ ನೋಡಬಹುದು. ಒಗ್ಗರಣೆಗೆ ಮೆಣಸು, ಜೀರಿಗೆ, ಬೆಳ್ಳುಳ್ಳಿ , ಈರುಳ್ಳಿ, ಕಡ್ಲೇಬೇಳೆ, ಉದ್ದಿನ ಬೇಳೆ ಜೊತೆಗೆ ಕತ್ತರಿಸಿಟ್ಟ ದೊಡ್ಡಪತ್ರೆ ಎಲೆ ಸೇರಿಸಿ ಬಾಡಿಸಿ ಹುಳಿಯೊಂದಿಗೆ ರುಬ್ಬಿಕೊಂಡು ಬೇಯಿಸಿ ತಣ್ಣಗಾಗಿಸಿದ ಅನ್ನದೊಂದಿಗೆ ಬೆರೆಸಿದರೆ ಘಮಘಮಿಸುವ ಚಿತ್ರಾನ್ನ ತಯಾರಾಗುತ್ತದೆ.