Saturday, October 18, 2025
Menu

ಲಂಚ ಕೇಳಿದ ಆರ್ ಓ ಅಮಾನತಿಗೆ ಸ್ಥಳದಲ್ಲೇ ಆದೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್

dk shivakumar

ಬೆಂಗಳೂರು: ಖಾತಾ ಮಾಡಿಸಲು 10-15 ಸಾವಿರ ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆ.ಆರ್. ಪುರಂ ಆರ್ ಓ ಬಸವರಾಜ್ ಅವರ ವಿರುದ್ಧ ಕ್ರಮ ಜರುಗಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ಕೆ ಆರ್ ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಶನಿವಾರ “ಬೆಂಗಳೂರು ನಡಿಗೆ” ಅಭಿಯಾನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಕಾರ್ಯಕ್ರಮದ ವೇಳೆ ಸುಲ್ತಾನ್ ಮಿರ್ಜಾ ಎಂಬುವವರು ಮಾತನಾಡಿ, “ಇಷ್ಟು ದಿನ ನಮ್ಮ ಆಸ್ತಿಯ ಖಾತೆ ಮಾಡಿಸಲು ಬಹಳಷ್ಟು ಕಷ್ಟಪಡಬೇಕಾಗಿತ್ತು. ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇದಕ್ಕಾಗಿ ಯೋಜನೆ ರೂಪಿಸಿ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಖಾತಾ ಮಾಡಿಸಲು ಕಂದಾಯ ಅಧಿಕಾರಿಗಳು ಹೆಚ್ಚು ಲಂಚ ಕೇಳುತ್ತಾರೆ. ಈ ವಿಚಾರವಾಗಿ ಬಿಬಿಎಂಪಿ ಕಮಿಷನರ್ ಬಳಿ ದೂರು ನೀಡಿದ್ದೇನೆ” ಎಂದರು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಲಂಚ ಕೇಳುತ್ತಿರುವ ಅಧಿಕಾರಿಯ ಹೆಸರು ಹೇಳಿ, ನಾನು ಇಲ್ಲೇ ಆ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ” ಎಂದರು.

ಆಗ ಸುಲ್ತಾನ್ ಮಿರ್ಜಾ ಅವರು, “ಆರ್ ಓ ಬಸವರಾಜ್, ವಿಜಿನಾಪುರ ಆರ್ ಐ ಅವರು ಲಂಚದ ಬೇಡಿಕೆ ಇಟ್ಟಿದ್ದಾರೆ. ನಾನು ಕಳೆದ ಎರಡು ತಿಂಗಳಿನಿಂದ ಅಲೆದಾಡುತ್ತಿದ್ದು, ಇವರು 10-15 ಸಾವಿರ ಲಂಚದ ಬೇಡಿಕೆ ಇಡುತ್ತಿದ್ದಾರೆ. ಆನ್ ಲೈನ್ ಮೂಲಕ ಅರ್ಜಿ ಹಾಕಿದರೂ ಅನುಮೋದನೆ ನೀಡುವುದಿಲ್ಲ. ಹೊರಮಾವು ಕಚೇರಿಗೆ ಹೋಗಿ ಎನ್ನುತ್ತಾರೆ. ಅಲ್ಲಿಗೆ ಹೋದರೆ ವಿಜಿನಾಪುರ ಬಿಬಿಎಂಪಿ ಕಚೇರಿಗೆ ಹೋಗಿ ಎನ್ನುತ್ತಾರೆ. ನನಗೆ ಮಾತ್ರ ತೊಂದರೆಯಾಗುತ್ತಿಲ್ಲ. ಹಿರಿಯ ನಾಗರಿಕರಿಗೂ ತೊಂದರೆಯಾಗುತ್ತಿದೆ. ಆ ಕಚೇರಿಯಲ್ಲಿ ಮಂಜು ಎನ್ನುವ ದಲ್ಲಾಳಿಯನ್ನು ಇಟ್ಟಿದ್ದಾರೆ. ಆತ ಪಾಲಿಕೆಯ ಸಿಬ್ಬಂದಿಯಲ್ಲ. ಆತ ಇದೆಲ್ಲವನ್ನು ನೋಡಿಕೊಳ್ಳುತ್ತಾನೆ” ಎಂದು ದೂರಿದರು.

ನಂತರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಲಂಚ ಬೇಡಿಕೆ ವಿಚಾರವಾಗಿ ಶೀಘ್ರ ಪರಿಶೀಲನೆ ನಡೆಸಿ ಶನಿವಾರ (ಇಂದು) ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಇದರ ಜೊತೆಗೆ‌ ಏಜೆಂಟ್‌ ವಿರುದ್ದ ಪೊಲೀಸ್ ‌ಇಲಾಖೆ ಮತ್ತು ಪಾಲಿಕೆ ಕ್ರಮ‌ ತೆಗೆದುಕೊಳ್ಳಲಿದೆ” ಎಂದು ತಿಳಿಸಿದರು.

ಆರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲವೆಂಬ ಸುಳ್ಳು ಆರೋಪ ಬಯಲಿಗೆಳೆದ ಡಿಸಿಎಂ

ಮಹಿಳೆಯೊಬ್ಬರು ತಮಗೆ ಆರು ತಿಂಗಳಿನಿಂದ ಗೃಹಲಕ್ಷ್ಮಿ ಬಂದಿಲ್ಲ, ಬೇಕಿದ್ದರೆ ನನ್ನ ಮೊಬೈಲ್ ಇಲ್ಲೇ ಇದೆ, ನೋಡಿ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ ಅವರು, “ಆರು ತಿಂಗಳಿನಷ್ಟು ಬಾಕಿ ಇಟ್ಟಿಲ್ಲ. ಸಾರ್ವಜನಿಕರ ಮುಂದೆ ಸುಮ್ಮನೆ ಆರು ತಿಂಗಳಿಂದ ಬಂದಿಲ್ಲ ಎಂದರೆ ಹೇಗೆ? ಇಲ್ಲಿ ನಮ್ಮ ಅಧಿಕಾರಿಗಳ ತಪ್ಪಿರಬೇಕು ಅಥವಾ ಇವರ ಆರೋಪ ತಪ್ಪಾಗಿರಬೇಕು. ಹೀಗಾಗಿ ಇಲ್ಲೇ ಇದನ್ನು ಪರಿಶೀಲಿಸುತ್ತೇನೆ” ಎಂದರು. ನಂತರ ಶಿವಕುಮಾರ್ ಅವರು ತಮ್ಮ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಅವರ ಮೂಲಕ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ “ಇಲ್ಲಿ ಮಹಿಳೆಯೊಬ್ಬರು ಆರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಏನಾಗಿದೆ” ಎಂದು ವಿಚಾರಿಸಿದರು. ದೂರವಾಣಿ ಕರೆಯಲ್ಲಿ ಅಧಿಕಾರಿಯು ‘ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಈ ತಿಂಗಳು ಸಂದಾಯವಾಗಿದೆ. ಈ ಮಹಿಳೆಯ ವಿಚಾರದಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ಪರಿಶೀಲಿಸಿ, ಅದನ್ನು ಬಗೆಹರಿಸುವೆ’ ಎಂದು ತಿಳಿಸಿದರು. ದೂರು ನೀಡಿದ ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ ರಾಜೇಂದ್ರ ಪ್ರಸಾದ್ ಅವರು, ಅಕ್ಟೋಬರ್ 3 ರಂದು ಜುಲೈ ತಿಂಗಳ ಗೃಹ ಲಕ್ಷ್ಮಿ ಹಣ ಪಾವತಿಯಾಗಿರುವ ಸಂದೇಶವನ್ನು ಡಿಸಿಎಂ ಅವರಿಗೆ ತೋರಿಸಿದರು. ಈ ವೇಳೆ ಶಿವಕುಮಾರ್ ಅವರು, ಗೃಹ ಲಕ್ಷ್ಮಿ ಹಣ ಪಾವತಿಯಾಗಿರುವ ಮೆಸೇಜ್ ಅನ್ನು ಸಾರ್ವಜನಿಕರ ಸಮ್ಮುಖದಲ್ಲಿ ಓದಿದರು.

“ಗೃಹಲಕ್ಷ್ಮಿ ಹಣದ ಪಾವತಿಯಾಗಿಲ್ಲ ಎಂದು ಈ ಮಹಿಳೆ ಮಾಡಿರುವ ಆರೋಪ ಸುಳ್ಳು. ಜುಲೈವವರೆಗಿನ ಹಣ ಸಂದಾಯವಾಗಿದ್ದು, ಆಗಸ್ಟ್ ತಿಂಗಳ ಹಣ ಸಂದಾಯ ಪ್ರಕ್ರಿಯೆಯಲ್ಲಿದೆ. ಈ ಮಹಿಳೆ ಆರೋಪ ಮಾಡಿದನ್ನು ನೋಡಿ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ತೀರ್ಮಾನಿಸಿದ್ದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ತರಾಟೆಗೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ, ಸದ್ಯ ಅವರು ಫೋನ್ ಕಾಲ್ ತೆಗೆದುಕೊಳ್ಳಲಿಲ್ಲ” ಎಂದರು.

ಯಾರೇ ಬೆದರಿಕೆ ಹಾಕಿದರೂ ಕಾನೂನು ಕ್ರಮ

ಎನ್.ಆರ್ ಲೇಔಟಿನ ನಿವಾಸಿ ವಿಘ್ನೇಶ್ ಎಂಬುವವರು ನಾನು 2 ವರ್ಷಗಳಿಂದ ನನ್ನ ನಿವೇಶನದಲ್ಲಿ ಮನೆ ಕಟ್ಟಿದ್ದು, ಆ ಜಾಗ ಖರೀದಿ ಮಾಡಬೇಕೆಂದು ಕೊಂಡಿದ್ದ ನೆರೆ ಮನೆಯ ವ್ಯಕ್ತಿ ಮಲ್ಲಿಕಾರ್ಜುನ್ ಎಂಬುವವರು ನಾನು ಕಟ್ಟಿರುವ ಮನೆಗೆ ಹೋಗಲು ಬಿಡುತ್ತಿಲ್ಲ. 10 ಲಕ್ಷ ಹಣ ನೀಡಬೇಕು. ಆಗ ಮಾತ್ರ ಮನೆ ಪ್ರವೇಶಿಸು ಎಂದು ರೌಡಿಗಳು ಹಾಗೂ ಕನ್ನಡಪರ ಸಂಘಟನೆಗಳ ಮೂಲಕ ಬೆದರಿಸುತ್ತಿದ್ದಾನೆ ಎಂದು ಕಣ್ಣೀರು ಹಾಕಿದರು. ಇದಕ್ಕೆ ಸ್ಪಂದಿಸಿದ ಶಿವಕುಮಾರ್ ಅವರು, “ಅವರು ಯಾವ ಸಂಘಟನೆಯವರೇ ಆಗಿರಲಿ, ಕಾಂಗ್ರೆಸ್ ನವರೇ ಆಗಿರಲಿ, ಬಿಜೆಪಿಗರೇ ಆಗಿರಲಿ, ದಳದವರೇ ಆಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ನೀವು ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಂಜೆ ವೇಳೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಅವರು 10 ಲಕ್ಷ ಕೇಳಿದ್ದೇ ಆದರೆ ಮೊದಲು ಲಿಖಿತ ದೂರು ನೀಡು ಕ್ರಮ ಕೈಗೊಳ್ಳುವಂತೆ ನಾನು ನೋಡಿಕೊಳ್ಳುತ್ತೇನೆ. ಒಮ್ಮೆ ದೂರು ಕೊಟ್ಟ ನಂತರ ಅದಕ್ಕೆ ಬದ್ಧವಾಗಿರಬೇಕು” ಎಂದು ತಿಳಿಸಿದರು.

“ಪಾಲಿಕೆ ಆಧಿಕಾರಿಗಳು ಆ ಜಾಗಕ್ಕೆ ಹೋಗಿ ಪರಿಸ್ಥಿತಿ ಏನಿದೆ ಎಂದು ಪರಿಶೀಲಿಸಿ, ಹಣ ಕೇಳಿ ಬೆದರಿಕೆ ಹಾಕಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

Related Posts

Leave a Reply

Your email address will not be published. Required fields are marked *