Menu

Yettinahole-ಎತ್ತಿನಹೊಳೆ: ಹೆಚ್ಚುವರಿ 423 ಎಕರೆ ಅರಣ್ಯ ಬಳಕೆಗೆ ಕೇಂದ್ರ ನಿರಾಕರಣೆ

23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಅನುಮತಿ ನೀಡಲು ನಿರಾಕರಿಸಿದೆ.

ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ 432 ಎಕ್ರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರವು ಪರಿಸರ ಸಚಿವಾಲಯಕ್ಕೆ ಮಾರ್ಚ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವಾಲಯದ ಡಿಐಜಿಎಫ್‌ ಪ್ರಣಿತಾ ಪೌಲ್‌ ನೇತೃತ್ವದ ಅಧಿಕಾರಿಗಳ ತಂಡವು ಯೋಜನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ರಾಜ್ಯ ಸರ್ಕಾರವು ಲೋಪಗಳನ್ನು ಸರಿಪಡಿಸಿ ಸೂಕ್ತ ಸಮಜಾಯಿಷಿ ನೀಡಿದ ಬಳಿಕವೇ ಹೆಚ್ಚುವರಿ ಅರಣ್ಯ ಬಳಕೆಗೆ ಅನುಮೋದನೆ ನೀಡಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು.

ನವದೆಹಲಿಯಲ್ಲಿ ಜೂನ್‌ 26ರಂದು ನಡೆದ ಸಲಹಾ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ನೀಡುವ ಬಗ್ಗೆ ಚರ್ಚೆ ನಡೆಯಿತು. ಕೇಂದ್ರದಿಂದ ಅನುಮೋದನೆ ಪಡೆಯುವ ಮುನ್ನವೇ ಯೋಜನೆಗಾಗಿ ಅರಣ್ಯ ಭೂಮಿ ಬಳಕೆ ಮಾಡಲಾಗಿದೆ ಎಂಬುದನ್ನು ಅಧಿಕಾರಿಗಳ ತಂಡವು ಹೇಳಿದೆ. ನಿಯಮ ಉಲ್ಲಂಘಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ಸಲಹಾ ಸಮಿತಿ ನಿರ್ದೇಶನ ನೀಡಿದೆ.

ಪಶ್ಚಿಮ ಘಟ್ಟದ ಎತ್ತಿನಹೊಳೆಯಿಂದ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ (24 ಟಿಎಂಸಿ ನೀರು ಹರಿಸುವ)ಈ ಯೋಜನೆಗೆ 13.93 ಹೆಕ್ಟೇರ್ ಅರಣ್ಯ ಬಳಕೆಗೆ 2016ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. 33 ಷರತ್ತುಗಳನ್ನು ವಿಧಿಸಿ 2016ರಲ್ಲಿ ಅನುಮೋದನೆ ಕೊಡಲಾಗಿತ್ತು. ಬಹುತೇಕ ಷರತ್ತುಗಳನ್ನು ಪಾಲನೆ ಮಾಡಿಲ್ಲ. ಕಾಮಗಾರಿ ಸಂದರ್ಭದಲ್ಲಿ ಭೂಕುಸಿತ ಹಾಗೂ ಮಣ್ಣಿನ ಕೊರೆತ ಉಂಟಾಗಿದೆ ಎಂದು ಎನ್‌ಜಿಟಿಯ ಮೇಲ್ವಿಚಾರಣಾ ತಂಡವು 2019ರಲ್ಲಿ ವರದಿ ಸಲ್ಲಿಸಿತ್ತು. ಭೂಕುಸಿತ ತಡೆಗೆ ಕ್ರಮ ಕೈಗೊಂಡಿಲ್ಲ. ಅನುಮೋದನೆಗಿಂತ ಹೆಚ್ಚುವರಿ ಅರಣ್ಯ ಬಳಸಲಾಗಿದೆ. ಕಾಮಗಾರಿಯಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ತಜ್ಞರ ತಂಡವು ಆಕ್ಷೇಪ ವ್ಯಕ್ತಪಡಿಸಿತ್ತು.

Related Posts

Leave a Reply

Your email address will not be published. Required fields are marked *