Menu

ಛಲವಾದಿ, ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ರಾಜ್ಯ ಸರ್ಕಾರ

ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಉಚ್ಛಾಟಿತ ನಾಯಕ ಕೆಎಸ್ ಈಶ್ವರಪ್ಪಗೆ ನೀಡಿದ್ದ ಭದ್ರತೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಬಿಜೆಪಿಯ ಈ ಇಬ್ಬರು ನಾಯಕರಿಗೆ ನೀಡಲಾಗಿದ್ದ ಭದ್ರತಾ ವ್ಯವಸ್ಥೆಯನ್ನು ವಾಪಸ್ ಪಡೆದು ಗೃಹ ಇಲಾಖೆ ಶುಕ್ರವಾರ ಈ ಆದೇಶ ಹೊರಡಿಸಿದೆ.

ಇದೇ ವೇಳೆ ಸಚಿವ ಹೆಚ್​.ಸಿ.ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.

ತಮಗೆ ನೀಡಿದ್ದ ಭದ್ರತಾ ವ್ಯವಸ್ಥೆ ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಛಲವಾದಿ ನಾರಾಯಣಸ್ವಾಮಿ ಖಂಡಿಸಿದ್ದು, ನನ್ನ ಭದ್ರತೆ ವಾಪಸ್ ಪಡೆದುಕೊಂಡು ಪ್ರಿಯಾಂಕ್ ಖರ್ಗೆಗೆ ಭದ್ರತೆ ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಭದ್ರತಾ ದೃಷ್ಟಿಯಿಂದ ಕೊಡಲೇ ಬೇಕು. ಆದರೆ ಮೂವರು ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿದ್ದಾರೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ (Priyank Kharge) ಇದ್ದಾರೆ. ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ, ಪ್ರಿಯಾಂಕ್ ಖರ್ಗೆ ಕುಟುಂಬವೂ ಕೂಡ ಹೊಣೆ ಎಂದು ಆಕ್ರೋಶ ಹೊರಹಾಕಿದರು.

ನನಗೆ ಕೊಟ್ಟ ಭದ್ರತೆಯನ್ನು ವಾಪಸ್ ಪಡೆದಿದ್ದು ಯಾಕೆ? ಇದಕ್ಕೆ ಗೃಹ ಸಚಿವರು ಉತ್ತರ ಕೊಡಲೇಬೇಕು. ಇಲ್ಲದೇ ಇದ್ದರೆ ನನಗೆ ಕೊಟ್ಟಿರುವ ಕಾರು, ಬೆಂಗಾವಲು,ಭದ್ರತಾ ಸಿಬ್ಬಂದಿ ಎಲ್ಲರನ್ನೂ ವಾಪಸ್ ಕಳುಹಿಸುತ್ತೇನೆ . ಪ್ರಿಯಾಂಕ್ ಖರ್ಗೆ ಮನೆಗೆ ಬೆದರಿಕೆ ಬಂದಿದೆ ಎಂದು ಮತ್ತಷ್ಟು ಅವರ ಮನೆಗೆ ಭದ್ರತೆ ನೀಡಿದ್ದಾರೆ. ನನ್ನ ಭದ್ರತೆ ವಾಪಸ್ ಪಡೆದು, ಅವರಿಗೆ ಭದ್ರತೆ ಹೆಚ್ಚಿಸಿದ್ದಾರೆ. ಇವರ ಭ್ರಷ್ಟಾಚಾರ ಎತ್ತಿ ತೋರಿಸುವ ಕೆಲಸ ವಿಪಕ್ಷ ನಾಯಕರು ಮಾಡಬಾರದು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ನಾನು ವಿಪಕ್ಷ ನಾಯಕನಾಗಿ ಒಂದೂವರೆ ವರ್ಷ ಆಗುತ್ತಿದೆ. ಇಲ್ಲಿವರೆಗೂ ಸರ್ಕಾರಿ ಗೃಹ ಕೊಟ್ಟಿಲ್ಲ. ಇದೇ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾಗ ಜಗಳ ಮಾಡಿ ಮನೆ ತೆಗೆದುಕೊಂಡಿದ್ದರು ಎಂದರು.

ರವಿಕುಮಾರ್ ಕೆಂಡಾಮಂಡಲ

ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ನೀಡಿದ್ದ ಭದ್ರತೆ ವಾಪಸ್​ ಪಡೆದಿರುವ ಬಗ್ಗೆ ಬಿಜೆಪಿ ಎಂಎಲ್​ಸಿ ಎನ್​.ರವಿಕುಮಾರ್ ಮಾತನಾಡಿ, RSS ಕಚೇರಿಗೆ ಕೊಟ್ಟಿರುವ ಭದ್ರತೆ ವಾಪಸ್ ಪಡೆದಿದ್ದು ಯಾಕೆ? ಸಂಘದ ಚಟುವಟಿಕೆಗಳು ಹತ್ತಿಕ್ಕುವ, ಅಭದ್ರತೆ ಉಂಟು ಮಾಡುವ ಪಿತೂರಿ ಸರ್ಕಾರವೇ ಮಾಡುತ್ತಿದ್ಯಾ? ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳು ಅನುಮತಿ ಪಡೆಯದೇ ಆರ್​​ಎಸ್​ಎಸ್ ಕಚೇರಿ ಮುಂದೆ ಬೇಕಾಬಿಟ್ಟಿ ಘೋಷಣೆ ಕೂಗಿದ್ದಾರೆ. ಕಿಡಿಗೇಡಿಗಳು ಅಲ್ಲದಿದ್ದರೆ ಅನುಮತಿ ಪಡೆದು ಪ್ರತಿಭಟನೆ ಮಾಡುತ್ತಿದ್ದರು. ಸರ್ಕಾರಿ ಸ್ಥಳಗಳಲ್ಲಿ ಅನುಮತಿ ಪಡೆದು ಚಟುವಟಿಕೆ ಮಾಡಲು ಆದೇಶಿಸಿದ್ದಾರೆ. ಕಾಂಗ್ರೆಸ್​ ಪಕ್ಷದ ಕಿಡಿಗೇಡಿಗಳ ವಿರುದ್ಧ ಕೇಸ್ ಹಾಕದೇ ಇದ್ದರೆ ಸಿಎಂ ಮತ್ತು 33 ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Related Posts

Leave a Reply

Your email address will not be published. Required fields are marked *