Menu

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಇಸಿ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ

ವಿಧಾನಸಭಾ ಚುನಾವಣೆಗೂ ಮುನ್ನ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸುವ ಭಾರತೀಯ ಚುನಾವಣಾ ಆಯೋಗದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನಗರಗಳ ತ್ವರಿತ ಬೆಳವಣಿಗೆ, ವಲಸೆ ಹೆಚ್ಚಿರುವುದು, ಯುವ ಜನರು ಮತದಾನಕ್ಕೆ ಅರ್ಹರಾಗಿರುವುದು ಮತ್ತು ವಿದೇಶಿ ಅಕ್ರಮ ವಲಸಿಗರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿರುವುದರಿಂದ ಪರಿಶೀಲನೆ ಪ್ರಕ್ರಿಯೆ ಅಗತ್ಯಎಂದು ಚುನಾವಣಾ ಆಯೋಗ ಹೇಳಿತ್ತು.

ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸಲು ಒಪ್ಪಿ ಮುಂದಿನ ವಿಚಾರಣೆಯನ್ನು ಜುಲೈ 10 ಕ್ಕೆ ನಿಗದಿಪಡಿಸಿದೆ. ಬಿಹಾರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳ ತ್ವರಿತ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಕೋರಿದರು.

ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಬಿಹಾರದ ಮಾಜಿ ಶಾಸಕ ಮುಜಾಹಿದ್ ಆಲಂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಚುನಾವಣಾ ಆಯೋಗವು ದೇಶಾದ್ಯಂತ ವಿಶೇಷ ಪರಿಷ್ಕರಣೆಗೆ ಆದೇಶಿಸಿದ್ದು, ಬಿಹಾರದಲ್ಲಿ ತಕ್ಷಣ ಜಾರಿಗೆ ತರಲಾಗಿದೆ.

ಚುನಾವಣಾ ಆಯೋಗದ ಆದೇಶವು ಸಂವಿಧಾನದ 14, 19, 21, 325 ಮತ್ತು 326ನೇ ವಿಧಿಗಳು ಹಾಗೂ 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳ ನಿಯಮ 21ಎ ನಿಬಂಧನೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನವನ್ನು ಪ್ರಶ್ನಿಸಿ ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸರ್ಕಾರೇತರ ಸಂಸ್ಥೆ ಅರ್ಜಿ ಸಲ್ಲಿಸಿದೆ. ಜೂನ್ 24 ರಂದು ಚುನಾವಣಾ ಆಯೋಗವು ಅನರ್ಹ ಹೆಸರುಗಳನ್ನು ತೆಗೆದುಹಾಕಿ ಮತ್ತು ಅರ್ಹ ನಾಗರಿಕರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರಿಸುವ ಉದ್ದೇಶದಿಂದ ಬಿಹಾರದಲ್ಲಿ ಎಸ್‌ಐಆರ್ ನಡೆಸಲು ನಿರ್ದೇಶನಗಳನ್ನು ನೀಡಿತ್ತು.

ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ಅನಧಿಕೃತ, ಮೃತ, ವಲಸೆ ಹೋಗಿ­ರುವ ಮತದಾರರ ಕೈ ಬಿಡುವ ಉದ್ದೇಶದೊಂದಿಗೆ ಜೂ.24ರಂದು ಪರಿಷ್ಕರಣೆ ಬಗ್ಗೆ ಆದೇಶ ಹೊರಡಿಸಿದ್ದ ಆಯೋಗವು ಜು.25ರೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಮತದಾರರಿಗೆ ಸೂಚಿಸಿದೆ. ಚುಣಾವಣಾ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಲಾಲು ನೇತೃತ್ವದ ಆರ್‌ಜೆಡಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

Related Posts

Leave a Reply

Your email address will not be published. Required fields are marked *