ಸರಿಗಮಪ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದ ಗಾಯಕಿ ಶಿವಮೊಗ್ಗದ ಸುಹಾನ ಸೈಯದ್ ಸ್ನೇಹಿತ ಹಾಗೂ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ಮದುವೆಯಾಗಿದ್ದಾರೆ.
ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್, ಕುಟುಂಬದವರು ಮತ್ತು ಕೆಲವೇ ಆಪ್ತರ ಸಮ್ಮುಖ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಯ ಸಮಯದಲ್ಲಿ ಸುಹಾನಾ ಗೋಲ್ಡನ್ ಬಾರ್ಡರ್ ಇರುವ ಕೆಂಪು ಮತ್ತು ಮರೂನ್ ಮಿಶ್ರಿತ ಬಣ್ಣದ ಸೀರೆ, ನಿತಿನ್ ಶಿವಾಂಶ್ ಕ್ರೀಮ್ ಕಲರ್ ಶೇರ್ವಾನಿ ಧರಿಸಿದ್ದರು. ಇವರ ಮದುವೆಯ ಪೋಟೊಗಳನ್ನು ಕಣ್ತುಂಬಿಕೊಂಡ ಸುಹಾನಾ ಅಭಿಮಾನಿಗಳು ʻಸೂಪರ್ ಜೋಡಿʼ ಎಂದು ಹಾರೈಸಿದ್ದಾರೆ.
ಈ ಅಂತರ್‌ಧರ್ಮೀಯ ಮದುವೆಗೆ ಅನೇಕ ಕಲಾವಿದರು ಹಾಗೂ ಗಾಯಕರು ಸಾಕ್ಷಿಯಾಗಿದ್ದರು. ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಬರೆಯಾಗಿತ್ತು ಎಂಬುದು ವಿಶೇಷ.