ಪ್ರತಿ ವರ್ಷ ರಾಜ್ಯಾದ್ಯಂತ ಶಾಲಾ ಹಂತದಲ್ಲೇ ಮಕ್ಕಳ ಹೃದಯದ ಆರೋಗ್ಯ ತಪಾಸಣೆಗೆ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕಾಲೇಜು ಹಂತಕ್ಕೂ ವಿಸ್ತರಿಸಲಾಗುವುದು. ಹೃದಯಾಘಾತಕ್ಕೆ ಕಾರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕ್ರಮ ಕೈಗೊಂಡು ಜಾಗೃತಿ ಮೂಡಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾಗಿರುವ ಹೃದಯಾಘಾತ ಮರಣಗಳ ವಾಸ್ತವಾಂಶ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೃದಯಾಘಾತ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ಆಸ್ಪತ್ರೆಗಳಲ್ಲಿಯೂ ಸಂಬಂಧಿಸಿದ ಸೌಲಭ್ಯ ಒದಗಿಸಲು ಸರ್ಕಾರ ಸಿದ್ಧವಾಗಿದ್ದು, ಹೃದಯಾಘಾತ ಎನ್ನಲಾದ ಪ್ರಕರಣಗಳ ಬಗ್ಗೆ ತನಿಖೆ ಹಾಗೂ ಮಾಹಿತಿ ಪಡೆಯಲು ಈಗಾಗಲೇ ಹೃದ್ರೋಗ ತಜ್ಞರ ತಂಡ ರಚಿಸಲಾಗಿದೆ. ವರದಿ ಬಳಿಕ ಮುಂದಿನ ಕ್ರಮದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಹೃದಯಾಘಾತಕ್ಕೆ ಆಹಾರ ಪದ್ಧತಿ ಬದಲಾವಣೆ, ಬದಲಾದ ಜೀವನ ಶೈಲಿ, ವಂಶ ಪಾರ್ಯಂಪಾರ್ಯ ಹೀಗೆ ಹತ್ತು ಹಲವು ಕಾರಣಗಳಿವೆ. ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆಯಲು ಮೃತಪಟ್ಟ ಕುಟುಂಬದ ಮನ ಒಲಿಸಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾರದ ಒಳಗಾಗಿ ಹಾಸನ ಜಿಲ್ಲೆಗೆ ಹೆಚ್ಚುವರಿ ಹೃದ್ರೋಗ ತಜ್ಞ ವೈದ್ಯರ ನೇಮಕ, ಅಗತ್ಯ ಇರುವ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು. ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ ಇದರ ಬಗ್ಗೆ ಜನರಲ್ಲಿ ಗೊಂದಲ ಬೇಡ ಎಂದರು.